ಆದಿತ್ಯನಾಥ್ ಗೆಲುವು ಮುಸ್ಲಿಂ ವಿರೋಧಿಗಳಿಗೆ ಹೆಚ್ಚಿನ ಬಲ

  • ಪ್ರಸೂನ್ ಸೋನಾಲಕರ್

ಬ್ರಿಟನ್ನಿನ ಮಾಧ್ಯಮಗಳಲ್ಲಿ ಉತ್ತರ ಪ್ರದೇಶದ ಚುನಾವಣೆಗಳನ್ನು ಹಿಂದುತ್ವವಾದಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೇಲುಗೈ ಸಾಧಿಸುವುದರ ನೆಲೆಯಲ್ಲೇ ವಿಶ್ಲೇಷಿಸಲಾಗುತ್ತಿದೆ. ಮುಸ್ಲಿಂ ವಿರೋಧ ಮತಾಂಧತೆಗೆ ಯೋಗಿ ಗೆಲುವು ಪೂರಕ ಎಂಬ ಹೆಡ್‍ಲೈನ್ಸ್ ಹೊತ್ತ ವಿಶ್ಲೇಷಣೆಗಳು ಪ್ರಸಿದ್ಧ `ಗಾರ್ಡಿಯನ್’ ಪತ್ರಿಕೆಯಲ್ಲಿ ಪ್ರಕಟವಾಗಿವೆ.

ಭಾರತದ ಬಹುಮುಖಿ ಸಂಸ್ಕøತಿಯ ಮೇಲೆ ಉತ್ತರ ಪ್ರದೇಶದ ಚುನಾವಣೆಗಳಲ್ಲಿ ಬಲಪಂಥೀಯ ಹಿಂದುತ್ವವಾದಿ ಪಕ್ಷದ ಗೆಲುವು ಯಾವ ರೀತಿ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಅನೇಕ ಪತ್ರಿಕೆಗಳು ವಿಶ್ಲೇಷಣೆ ಮಾಡಿವೆ. ಆದರೆ ಆದಿತ್ಯನಾಥ್ ಗದ್ದುಗೆ ಏರಿರುವುದನ್ನು ಮುಸ್ಲಿಂ ವಿರೋಧಿ ಧೋರಣೆಗೆ ಪ್ರೇರಣೆ ಎಂದು `ಗಾರ್ಡಿಯನ್’ ಪತ್ರಿಕೆ ಮಾತ್ರ ನೇರವಾಗಿ ಹೇಳಿದೆ.

“ಇತರ ಹಲವಾರು ಕ್ಷೇತ್ರಗಳಲ್ಲಿ ಕಳಪೆ ಸಾಧನೆ ಮಾಡುತ್ತಿರುವ ಭಾರತದ ಪ್ರಭುತ್ವ ತನ್ನ ವೈಫಲ್ಯಗಳನ್ನು ಮರೆಮಾಚಲು ಸರ್ಕಸ್ ಸಿದ್ಧಪಡಿಸುತ್ತಿದೆ. ಈ ಹಿನ್ನೆಲೆಯಲ್ಲೇ ಕಪ್ಪುಹಣ ನಿಯಂತ್ರಿಸುವ ನೆಪದಲ್ಲಿ ಕಳೆದ ನವಂಬರಿನಲ್ಲಿ ಚಲಾವಣೆಯಲ್ಲಿದ್ದ ಶೇ 86ರಷ್ಟು ಹಣವನ್ನು ರದ್ದುಪಡಿಸಲಾಗಿತ್ತು. ಒಂದು ಕಾಲದಲ್ಲಿ ಎಂತಹುದೇ ಸಂದರ್ಭದಲ್ಲೂ ಮುನ್ನಡೆ ಸಾಧಿಸುತ್ತಿದ್ದ ದೇಶ ಇಂದು ಹಿನ್ನಡೆ ಸಾಧಿಸುತ್ತಿದೆ” ಎಂದು ಗಾರ್ಡಿಯನ್ ತನ್ನ ಸಂಪಾದಕೀಯದಲ್ಲಿ ಹೇಳಿದೆ.

ತನ್ನ ಮುಸ್ಲಿಂ ವಿರೋಧಿ ಧೋರಣೆಗೆ ಪ್ರಸಿದ್ಧಿಯಾಗಿರುವ ಯೋಗಿ ಆದಿತ್ಯನಾಥರÀನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೂಲಕ ಹಿಂದೂ ಮತಗಳನ್ನು ಕ್ರೋಢೀಕರಿಸಿ ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ಹವಣಿಸುತ್ತಿದೆ ಎಂದು ಬಿಬಿಸಿ ದಕ್ಷಿಣ ಏಷಿಯಾದ ವಿಶ್ಲೇಷಕ ಅನ್ಬರಸನ್ ಎದಿರಾಜನ್ ಹೇಳಿದ್ದಾರೆ. ಇದರಿಂದ ಬಿಜೆಪಿ ಧೃವೀಕರಣದಲ್ಲಿ ಯಶಸ್ವಿಯಾಗಲೂಬಹುದು ಅಥವಾ ವಿರೋಧ ಪಕ್ಷಗಳ ಧೃವೀಕರಣಕ್ಕೂ ನೆರವಾಗಬಹುದು ಎಂದು ಎದಿರಾಜನ್ ಹೇಳಿದ್ದಾರೆ.