ಜಾತ್ಯತೀತ ವ್ಯವಸ್ಥೆಯಿಂದ ಮಾತ್ರ ದೇಶದ ಉಳಿವು

ಕಾಂಗ್ರೆಸ್ ಸಮಾವೇಶದಲ್ಲಿ ದಿನೇಶ್ ಗುಂಡೂರಾವ್

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : “ಹಿಂದುತ್ವ ಹಾಗೂ ಕೋಮುಸಂಘರ್ಷದಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಅಮಾಯಕರ ಸಾವಿಗೆ ಕಾರಣರಾಗಿವ ಬಿಜೆಪಿಯಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ, ಕೇವಲ ಜಾತ್ಯತೀಯತೆ ನೆಲೆಗಟ್ಟಿನಲ್ಲಿ ಮಾತ್ರ ದೇಶದ ಉಳಿವು ಸಾಧ್ಯ” ಎಂದು ಆಹಾರ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಅವರು ಕಾರ್ಕಳದಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, “ಭಾರತವನ್ನು ವಿಶ್ವಕ್ಕೆ ಪರಿಚಯಿಸಿರುವ ಕಾಂಗ್ರೆಸ್ ದೇಶಕ್ಕೆ ಅಪಾರ ಕೊಡುಗೆ ನೀಡಿದೆ. ಆದರೆ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್ ಸುಳ್ಳುಗಾರ, ನೋಟು ಅಮಾನ್ಯ ಮಾಡಿ ಕೋಟ್ಯಂತರ ಬಡವರ ಸಣ್ಣ ವ್ಯಾಪಾರಿಗಳ ಹಣದೋಚಿ ದೇಶದ ಆರ್ಥಿಕತೆಯನ್ನು ಹಾಳುಗೆಡವಿದ ಪರಿಣಾಮ ಆರ್ಥಿಕ ಹಿಂಜರಿಕೆಯಿಂದ 15 ಲಕ್ಷ ಉದ್ಯೋಗ ನಷ್ಟವಾಗಿದೆ” ಎಂದರು.

“ಮೋದಿ ಮನ್ ಕಿ ಬಾತಿನಲ್ಲಿ ಮಾಡದ ಸಾಧನೆ ಹೇಳಿಕೊಂಡರೆ ನಮ್ಮ ಸರಕಾರ ಕಾಮ್ ಕೀ ಬಾತ್ ಮೂಲಕ ಕೆಲಸ ಮಾಡಿ ನುಡಿದಂತೆ ನಡೆದಿದ್ದೇವೆ” ಎಂದರು.

“ಇಲ್ಲಿನ ಶಾಸಕ ಸುನಿಲ್ ಕುಮಾರ್ ಒಬ್ಬ ಮಹಾನ್ ಭ್ರಷ್ಟಾಚಾರಿ ಹಾಗೂ ಸುಳ್ಳುಗಾರ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ” ಎಂದರು.

ಈ ವೇಳೆ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಮಾತನಾಡಿ, “ಮೋದಿ ಅಧಿಕಾರಕ್ಕೆ ಬಂದಲ್ಲಿ ವಿದೇಶದಲ್ಲಿನ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ತಲಾ 15 ಲಕ್ಷ ರೂ ಜಮಾ ಮಾಡುವುದಾಗಿ ಹೇಳಿಕೆ ನೀಡಿ ಬಳಿಕ ನೋಟ್ ಬ್ಯಾನ್ ಮಾಡಿ ದೇಶವನ್ನು ದುಃಸ್ಥಿತಿಯತ್ತ ತಳ್ಳಿದ್ದಾರೆ” ಎಂದರು.

“ಕಾಂಗ್ರೆಸ್ ತಂದಿರುವ ಯೋಜನೆಗಳ ಹೆಸರುಗಳನ್ನು ಬದಲಿಸಿ ಅನುಷ್ಠಾನಗೊಳಿಸಿರುವುದೇ ಮೋದಿಯ ಸಾಧನೆಯಾಗಿದೆ, ಮಾತ್ರವಲ್ಲದೇ ಈ ಹಿಂದಿನ ರಾಜ್ಯ ಬಿಜೆಪಿ ಸರಕಾರದಲ್ಲಿನ 11 ಸಚಿವರು ಜೈಲಿಗೆ ಹೋಗಿದ್ದು ಜನರು ಇದನ್ನು ಮರೆತಿಲ್ಲ” ಎಂದರು.

ಸಂಸದ ವೀರಪ್ಪ ಮೊಯ್ಲಿ ಮಾತನಾಡಿ, “ಚುನಾವಣೆಯಲ್ಲಿ ಗೆಲ್ಲಲು ಕೇವಲ ಹಣ ಅಥವಾ ಜಾತಿ ಬಲದಿಂದ ಸಾಧ್ಯವಿಲ್ಲ, ಜನರ ಪ್ರೀತಿ ವಿಶ್ವಾಸದಿಂದ ಮಾತ್ರ ಗೆಲ್ಲಬಹುದೆಂದು ತಾನು ಚಿಕ್ಕಬಳ್ಳಾಪುರದಲ್ಲಿ ಸಾಧಿಸಿ ತೋರಿಸಿದ್ದೇನೆ” ಎಂದು ಹೇಳಿದರು.

“ಕಾರ್ಕಳ ಕ್ಷೇತ್ರ ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಮುಂದೆಯೂ ಕಾರ್ಕಳ ಕ್ಷೇತ್ರವನ್ನು ಗೆಲ್ಲಲೇಬೇಕು. ಈ ನಿಟ್ಟಿನಲ್ಲಿ ಗುಂಪುಗಾರಿಕೆ ಬಿಟ್ಟು ಪಕ್ಷ ಸೂಚಿಸಿದ ಅಭ್ಯರ್ಥಿಯನ್ನು ಬೆಂಬಲಿಸಬೇಕು” ಎಂದರು.