ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಮಾತ್ರ ಅರ್ಜಿ !

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ರಾಜ್ಯಾದ್ಯಂತ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆ ಶೀಘ್ರದಲ್ಲೇ ನಡೆಯಲಿದ್ದು, ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಯುವ ಕಾಂಗ್ರೆಸ್ ಸದಸ್ಯರಾಗಿ ನೋಂದಾವಣೆಗೊಂಡವರಿಗೆ ಮಾತ್ರ ಮತದಾನದಲ್ಲಿ ಭಾಗವಹಿಸುವ ಹಕ್ಕು ಇರುತ್ತದೆ. ಈಗಾಗಲೇ ರಾಜ್ಯಾದ್ಯಂತ ಯುವ ಸದಸ್ಯರ ಸದಸ್ಯತನ ನಡೆಯುತ್ತಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಸದಸ್ಯರ ನೋಂದಾವಣೆ ಭರ್ಜರಿಯಾಗಿ ನಡೆಯುತ್ತಿದೆ. ಆದರೆ ಪುತ್ತೂರಿನಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳು ಮಾತ್ರ ಅಧ್ಯಕ್ಷ ಹುದ್ದೆಯ ಪೈಪೋಟಿಯಲ್ಲಿದ್ದು, ಉಳಿದ ಯಾವುದೇ ಜಾತಿಯ ಅಭ್ಯರ್ಥಿಗಳು ಅಧ್ಯಕ್ಷ ಹುದ್ದೆಯ ಸ್ಪರ್ದೆಯಲ್ಲಿ ಇಲ್ಲ.

ಕಳೆದ ಬಾರಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಅರ್ಷದ್ ದರ್ಬೆ ಈ ಬಾರಿಯೂ ಚುನಾವಣಾ ಕಣದಲ್ಲಿದ್ದಾರೆ. ಕಳೆದ ಎರಡು ವರ್ಷದ ಅವಧಿಯಲ್ಲಿ ಪುತ್ತೂರಿನಲ್ಲಿ ಯುವ ಕಾಂಗ್ರೆಸ್ ಪಕ್ಷಕ್ಕಾಗಿ ಅನೇಕ ಕಾರ್ಯತಂತ್ರವನ್ನು ರೂಪಿಸಿದೆ. ಈ ಕಾರಣಕ್ಕೆ ರಾಜ್ಯದಲ್ಲಿ ಪುತ್ತೂರು ಯುವ ಕಾಂಗ್ರೆಸ್ಸಿಗೆ ಒಳ್ಳೆಯ ಹೆಸರಿದೆ. ಈ ಕಾರಣಕ್ಕಾಗಿ ಈ ಬಾರಿಯೂ ಅಲ್ಪಸಂಖ್ಯಾತ ಅಭ್ಯರ್ಥಿಗಳೇ ಚುನಾವಣಾ ಕಣದಲ್ಲಿದ್ದಾರೆ. ಹಾಲಿ ಅಧ್ಯಕ್ಷರು ಕಣದಲ್ಲಿದ್ದು, ಜೊತೆಗೆ ಉಪ್ಪಿನಂಗಡಿಯ ಗ್ರಾ ಪಂ ಸದಸ್ಯ ತೌಸೀಫ್ ಹೆಸರು ಕೇಳಿ ಬರುತ್ತಿದೆ. ಜೊತೆಗೆ ಇನ್ನೂ ಮೂವರು ಅಲ್ಪಸಂಖ್ಯಾತರ ಹೆಸರೇ ಕೇಳಿ ಬರುತ್ತಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಈಗಾಗಲೇ 2000ಕ್ಕೂ ಮಿಕ್ಕಿ ಸದಸ್ಯರ ನೋಂದಾವಣೆಯಾಗಿದ್ದು, ಹಾಲಿ ಅಧ್ಯಕ್ಷರ ಬೆಂಬಲಿಗರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂದು ಕಾಂಗ್ರೆಸ್ಸಿನ ಬಲ್ಲ ಮೂಲಗಳು ತಿಳಿಸಿದೆ.