`ಲ್ಯಾಂಪ್ಸ್ ಸದಸ್ಯರಿಗೆ ಮಾತ್ರ ಕಾಡುತ್ಪತ್ತಿ ಸಂಗ್ರಹ ಅನುಮತಿ’

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಸರ್ಕಾರದ ಮಾರ್ಗಸೂಚಿ ಹಾಗೂ ಇಲಾಖೆಯ ನಿರ್ದೇಶನಂದತೆ ಅರಣ್ಯ ಪ್ರದೇಶದಲ್ಲಿನ ಪರಿಶಿಷ್ಟ ವರ್ಗದ ಲ್ಯಾಂಪ್ಸ್ ಸದಸ್ಯರ ಹೊರತು ಕಾಡುತ್ಪತ್ತಿಗಳಾದ ರಾಮಪತ್ರೆ, ದಾಲ್ಚೀನಿ ಎಲೆ, ಜೇನು, ಕಾಡು ಕರಿಮೆಣಸು, ಹುಣಸೆಹುಳಿ ಇತ್ಯಾದಿಗಳನ್ನು ಸಂಗ್ರಹಿಸಲು ಅಥವಾ ಮಾರಾಟ ಮಾಡಲು ಅವಕಾಶಗಳಿಲ್ಲ ಎಂದು ಪುತ್ತೂರು ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘ (ಲ್ಯಾಂಪ್ಸ್) ಅಧ್ಯಕ್ಷ ಮಂಜುನಾಥ ಅವರು ಸ್ಪಷ್ಟಪಡಿಸಿದ್ದಾರೆ.

ಅವರು ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿ, “ಕಳೆದ ಹಲವಾರು ವರ್ಷಗಳಿಂದ ಲ್ಯಾಂಪ್ಸ್ ಸಹಕಾರಿ ಸಂಘದ ಸದಸ್ಯರು ಕಿರು ಕಾಡುತ್ಪತ್ತಿಯನ್ನು ಸಂಗ್ರಹಿಸುತ್ತಿದ್ದಾರೆ. 2016-17ನೇ ಸಾಲಿನಲ್ಲಿ ಸಂಘಕ್ಕೆ ಮಂಗಳೂರು ಉಪರಣ್ಯ ಸಂಕ್ಷಣಾಕಾರಿಯವರಿಂದ ಕಿರುಕಾಡುತ್ಪತ್ತಿ ಸಂಗ್ರಹಣಾ ಹಕ್ಕು ಮಂಜೂರಾಗಿದ್ದು, ಕರಾರು ಪತ್ರ ದೊರಕಿರುತ್ತದೆ. ಈ ಹಿನ್ನಲೆಯಲ್ಲಿ ಸಂಘದ ನಿರ್ಣಯದಂತೆ ಸಂಗ್ರಹ ಹಂಚಿಕೆ ಮಾಡಲಾಗಿದೆ. ಆದರೆ ಸಂಘದ ಸದಸ್ಯರಲ್ಲದ ಕಡಬ ಮತ್ತು ಕುಟ್ರುಪ್ಪಾಡಿ ಗ್ರಾಮದ ಸುಮಾರು 50 ಮಂದಿ ಶನಿವಾರ ಯಾವುದೇ ಪೂರ್ವಸೂಚನೆ ನೀಡದೆ ಸಂಘದ ಕಚೇರಿ ಮುಂಬಾಗದಲ್ಲಿ ತಮಗೆ ಕಿರುಕಾಡುತ್ಪತ್ತಿ ಸಂಗ್ರಹಕ್ಕೆ ಅವಕಾಶ ನೀಡುವಂತೆ ಪ್ರತಿಭಟನೆ ನಡೆಸಿ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದು, ಜೀವ ಬೆದರಿಕೆ ಒಡ್ಡಿರುವುದು ದುರುದ್ದೇಶ ಪೂರಿತ ಹಾಗೂ ಕಾನೂನು ಬಾಹಿರವಾಗಿರುತ್ತದೆ ಮತ್ತು ಖಂಡನೀಯವಾಗಿದೆ” ಎಂದರು.

“ಪ್ರತಿಭಟನಾಕಾರರು ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡಿದ್ದಾರೆ. ಕಾನೂನಿನ ಅಜ್ಞಾನದಿಂದ ಅವರು ಇಂತಹ ಕೆಲಸ ಮಾಡಿದ್ದಾರೆ” ಎಂದು ಸ್ಪಷ್ಟನೆ ನೀಡಿರುವ ಅಧ್ಯಕ್ಷರು, ತಮ್ಮ ಸಂಘವು ಸರ್ಕಾರದ ಆದೇಶದಂತೆ ಮತ್ತು ಅರಣ್ಯ ಇಲಾಖೆಯ ಮಾರ್ಗಸೂಚಿಯಂತೆ 1977ರಿಂದ ಕಿರುಕಾಡುತ್ಪತ್ತಿ ಸಂಗ್ರಹಿಸುವ ಕಾರ್ಯ ನಡೆಸುತ್ತಿದ್ದು, ಇದರಿಂದ ಸಂಗ್ರಹವಾಗಿರುವ ಹಣವನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆ ಮಾಡುತ್ತಿದೆ ಎಂದರು.