ಕಾರುಗಳ ಡಿಕ್ಕಿ : ಒಬ್ಬ ಸಾವು

ಅಪಘಾತದಲ್ಲಿ ನುಜ್ಜುಗುಜ್ಜಾದ ಕಾರು

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಅತೀ ವೇಗವಾಗಿ ಬಂದ ಕಾರೊಂದು ಚತುಷ್ಪಥ ನಡುವಿನ ಡಿವೈಡರ್ ಏರಿ ಇನ್ನೊಂದು ರಸ್ತೆಗೆ ಬಂದು ಎದುರಿನಿಂದ ಬರುತ್ತಿದ್ದ ಫಾರ್ಚೂನರ್ ಕಾರಿಗೆ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೆಕ್ಕಟ್ಟೆ ಸಮೀಪದಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಘಟನೆಯಲ್ಲಿ ವ್ಯಾಗನರ್ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೃತಪಟ್ಟ ವ್ಯಕ್ತಿಯನ್ನು ಕೇರಳದ ನಿವಾಸಿ ಶಿಬು ಎಂದು ಗುರುತಿಸಲಾಗಿದೆ.

ವ್ಯಾಗನರ್ ಕಾರಿನಲ್ಲಿ ಸ್ನೇಹಿತರು ಕೇರಳ ಕಡೆಯಿಂದ ಮುರುಡೇಶ್ವರ ಕಡೆಗೆ ಪ್ರಯಾಣಿಸುತ್ತಿದ್ದರು. ಫಾರ್ಚೂನರ್ ವಾಹನ ಮಂಗಳೂರು ಕಡೆಗೆ ಚಲಿಸುತ್ತಿತ್ತು. ಚಾಲಕಗೆ ನಿದ್ದೆ ಬಂದಿರಬಹುದೆಂದು ಶಂಕಿಸಲಾಗಿದ್ದು, ಅತೀ ವೇಗದಲ್ಲಿ ಬಂದ ವ್ಯಾಗನರ್ ಒಂದಡಿ ಎತ್ತರದ ನಾಲ್ಕಡಿ ಅಗಲದ ಡಿವೈಡರ್ ಹಾರಿ ಬಂದು ಫಾರ್ಚೂನರ್ ಕಾರಿಗೆ ಡಿಕ್ಕಿಯಾಗಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಫಾರ್ಚೂನರ್ ಕಾರಿನ ಒಂದು ಭಾಗ ನುಜ್ಜುಗುಜ್ಜಾಗಿದೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.