ಒಬ್ಬ ಪೊಲೀಸ್ ವಶ, ಮತ್ತಿಬ್ಬರು ನಾಪತ್ತೆ

ಅಡುಗೆ ಮನೆಯಲ್ಲಿದ್ದ 44 ಪವನ್ ಕಳವು ಪ್ರಕರಣ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಉಕ್ಕುಡದಲ್ಲಿ ಮನೆಯವರು ಇಲ್ಲದ ಸಂದರ್ಭ ಕಿಟಕಿ ಮೂಲಕ ಒಳನುಗ್ಗಿ ಅಡುಗೆ ಮನೆಯಲ್ಲಿದ್ದ 44 ಪವನ್ ತೂಕದ ಚಿನ್ನಾಭರಣ ಕಳವು ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿದ್ದು, ಮೂವರು ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಿದ್ದಾರೆ. 25 ಪವನ್ ಚಿನ್ನಾಭರಣ, ನಗದು ಹಣ, ದ್ವಿಚಕ್ರ ವಾಹನ ಮತ್ತು ಐಷಾರಾಮಿ ಕಾರನ್ನು ಬಂಧಿತನಿಂದ ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಮಾಸ್ಟರ್ ಮೈಂಡ್ ಝರೀನಾ ಮತ್ತು ಇನ್ನೊಬ್ಬ ನಾಪತ್ತೆಯಾಗಿದ್ದು ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ.

ಡಿಸೆಂಬರ್ 6ರಂದು ರಾತ್ರಿ ವಿಟ್ಲ ಠಾಣಾ ವ್ಯಾಪ್ತಿಯ ಉಕ್ಕುಡ ಅಬ್ಬಾಸ್ ಹಾಜಿ ಮನೆಯವರು ಮದುವೆ ಕಾರ್ಯಕ್ಕೆ ಹೋಗಿ ಬರುವಷ್ಟರಲ್ಲಿ ಮನೆಯ ಅಡುಗೆ ಕೋಣೆಯ ಅಕ್ಕಿ ಡಬ್ಬದಲ್ಲಿಟ್ಟಿದ್ದ ಚಿನ್ನಾಭರಣಗಳು ಕಳವಾಗಿತ್ತು. ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಇದೊಂದು ಪರಿಚಿತರ ಕೃತ್ಯವೆಂದು `ಕರಾವಳಿ ಅಲೆ’ ವರದಿ ಮಾಡಿತ್ತು. ತಂತ್ರಜ್ಞಾನದ ಮೂಲಕ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಕಳ್ಳತನ ನಡೆದ ಮನೆಯವರ ಸಂಬಂಧಿಕಳಾಗಿರುವ ಒಕ್ಕೆತ್ತೂರು ಸುರುಂಬಡ್ಕದ ನಿವಾಸಿ ಅದ್ರಾಮ ಯಾನೆ ಅಬ್ದುಲ್ ರಹಿಮಾನ್ ಪತ್ನಿ ಝರೀನಾಳ ಪಾತ್ರ ಸ್ಪಷ್ಟವಾಗಿತ್ತು. ಆಕೆಯ ಪತಿಯ ಅಣ್ಣ ಎಂ ಕೆ ಮೂಸಾರ ಪುತ್ರ ಮಹಮ್ಮದ್ ಅಶ್ರಫ್ (29) ಮತ್ತು ಸುರುಂಬಡ್ಕದ ಬಾಡಿಗೆ ಮನೆ ನಿವಾಸಿ ಅದ್ದ ಯಾನೆ ಅಬ್ದುಲ್ ರಹಿಮಾನ್ ಪುತ್ರ ಅಬ್ದುಲ್ ಖಾದರ್ ಯಾನೆ ಇರ್ಷಾದ್ ಝರೀನಾಳ ಸೂಚನೆಯಂತೆ ಕಳ್ಳತನ ನಡೆಸಿದ ಖದೀಮರು.

ಮಾಸ್ಟರ್ ಮೈಂಡ್ ಝರೀನಾ ಅದ್ರಾಮ ಯಾನೆ ಅಬ್ದುಲ್ ರಹಿಮಾನ್ ಕಳೆದ 34 ವರ್ಷಗಳಿಂದ ಕುವೈಟಿನಲ್ಲಿ ದುಡಿಯುತ್ತಿರುವ ಮೃದು ಸ್ವಭಾವದ ವ್ಯಕ್ತಿ. ಸುರುಂಬಡ್ಕದ ಮನೆಯಲ್ಲಿ ಒಬ್ಬ ಪುತ್ರನ ಜೊತೆ ವಾಸಿಸುತ್ತಿರುವ ಅದ್ರಾಮರ ಪತ್ನಿ ಝರೀನಾ ತಿರುಗಾಡಲು ಹುಂಡೈ ವರ್ನಾ ಐಷಾರಾಮಿ ಕಾರು ಇಟ್ಟುಕೊಂಡಿದ್ದಾಳೆ. ಅದಲ್ಲದೇ ಪತಿಯ ಅಣ್ಣನ ಮಗ ಅವಿವಾಹಿತ ಮಹಮ್ಮದ್ ಅಶ್ರಫ್ ಜೊತೆ ಕಳೆದ 9 ವರ್ಷಗಳಿಂದ ಝರೀನಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆಂದು ಸ್ವತಃ ಅಶ್ರಫ್ ತಂದೆಯೇ ಆರೋಪಿಸಿದ್ದಾರೆ. ಇದೇ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿರುವ ಇರ್ಷಾದ್ ಕೂಡಾ ಝರೀನಾಳ ಅಣತಿಯಂತೆ ಹರಾಮಿ ಕೆಲಸ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಝರೀನಾ ಬಂಧನದ ಬಳಿಕವಷ್ಟೆ ಆಕೆಯ ಇನ್ನಷ್ಟು ಕುಕೃತ್ಯಗಳು ಬಯಲಾಗಲಿದ್ದು, ಅಶ್ರಫ್ ಪೊಲೀಸರ ಕೈಗೆ ಸಿಕ್ಕಿಬೀಳುತ್ತಿದ್ದಂತೆ ಝರೀನಾ ಮತ್ತು ಇರ್ಷಾದ್ ಕೇರಳದ ಕಡೆಗೆ ನಾಪತ್ತೆಯಾಗಿದ್ದಾರೆ.

ಕದ್ದ ಚಿನ್ನದ ಗಿರಾಕಿ ಜುವೆಲ್ಲರಿ ಮಾಲಿಕ ಮಂಗಪದವಿನಲ್ಲಿರುವ ಪ್ರಣಾಮ್ ಜುವೆಲ್ಲರಿ ಮಾಲಿಕ ಸುಧಾಕರ ಆಚಾರಿ ಕದ್ದ ಚಿನ್ನಾಭರಣಗಳನ್ನು ಖರೀದಿಸುವ ಕುಖ್ಯಾತಿ ಪಡೆದಿದ್ದಾನೆ. ಪೊಲೀಸರ ವಿಚಾರಣೆ ಸಂದರ್ಭ ಸುಧಾಕರನಿಗೆ ಮತ್ತು ಬಂಟ್ವಾಳದ ಚಿನ್ನದಂಗಡಿಗೆ ಆಭರಣಗಳನ್ನು ನೀಡಿದ್ದೇನೆಂದು

ಅಶ್ರಫ್ ಬಾಯ್ಬಿಟಿದ್ದಾನೆ. ಕಳವಾಗಿರುವ 44 ಪವನ್ ಚಿನ್ನಾಭರಣದ ಪೈಕಿ ಆರೋಪಿಯಿಂದ 25 ಪವನ್ ಮಾತ್ರ ವಶಕ್ಕೆ ಪಡೆದಿರುವುದು ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿದೆ. ನಾಪತ್ತೆಯಾಗಿರುವ ಝರೀನಾಳ ಐಷಾರಾಮಿ ಕಾರು, ಬಂಧಿತ ಆರೋಪಿ ಅಶ್ರಫನ ದ್ವಿಚಕ್ರ ವಾಹನ, 5 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು 30 ಸಾವಿರ ನಗದು ಹಣವನ್ನು ವಶಪಡಿಸಿದ್ದಾರೆ.

 

LEAVE A REPLY