ಫೇಸ್ಬುಕ್ಕಲ್ಲಿ ಸಚಿವ ಖಾದರಗೆ ಅವಮಾನ : ಒಬ್ಬ ಬಂಧನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು ಟಿ ಖಾದರ್ ವಿರುದ್ಧ ಫೇಸ್ಬುಕ್ಕಿನಲ್ಲಿ ಅವಹೇಳನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಮೂಡುಬಿದಿರೆ ಧರೆಗುಡ್ಡೆ ನಿವಾಸಿ ಹೊಸಮನೆಯ ದಿವ್ಯಪ್ರಸಾದ್ (35) ಬಂಧಿತ ಆರೋಪಿ. ಬೆಂಗಳೂರಿನ ಕ್ಯಾಂಟೀನಿನಲ್ಲಿ ಕೆಲಸ ಮಾಡಿಕೊಂಡಿದ್ದ ದಿವ್ಯಪ್ರಸಾದನನ್ನು ಮಂಗಳೂರು ಪೊಲೀಸರು ಆತ ಕೆಲಸ ಮಾಡಿಕೊಂಡಿದ್ದ ಕ್ಯಾಂಟೀನಿನಿಂದ ವಶಕ್ಕೆ ಪಡೆದುಕೊಂಡಿದ್ದಾರೆ.

ಸಚಿವರನ್ನು ಅವಹೇಳನ ಕಾರಿಯಾಗಿ ಫೇಸ್ಬುಕ್ಕಿನಲ್ಲಿ ಈತ ನಿಂದಿಸಿರುವುದನ್ನು ಈತ ಒಪ್ಪಿಕೊಂಡಿದ್ದಾನೆ. ಎರಡು ವಾರದ ಹಿಂದೆ ಹಲೋ ಮಂತ್ರಿ ಕಾರ್ಯಕ್ರಮದ ಪೋಸ್ಟನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲಾಗಿತ್ತು. ಆ ಕಾರ್ಯಕ್ರಮದಲ್ಲಿ ಯು ಟಿ ಖಾದರ್ ಭಾಗವಹಿಸಿದ್ದರು. ಆರೋಪಿ ವಿರುದ್ಧ ಖಾದರ್ ಹಿತೈಷಿ ಬೊಳಿಯಾರಿನ ಅಶ್ರಫ್ ಮೋನು ಎಂಬವರು ಕದ್ರಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.