ದರೋಡೆ ಯತ್ನ : ಒಬ್ಬನ ಬಂಧನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮೀನು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದನ್ನು ತಡೆದು ಚಾಲಕನ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಠಾಣಾ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ಬಂಧಿತ ಆರೋಪಿ ತೊಕ್ಕೊಟ್ಟು ನಿವಾಸಿ ಕವಿತ್ (24).  ಇನ್ನೂ ಮೂವರು ಆರೋಪಿಗಳಾದ ಧೀರಜ್, ಮನೋಜ್, ಪ್ರಶಾಂತ್ ಪರಾರಿಯಾಗಿದ್ದಾರೆ.

ಉಳ್ಳಾಲದ ಮೀನಿನ ಕಾರ್ಖಾನೆಗೆ ಮೀನು ಹೇರಿಕೊಂಡು ಬರುತ್ತಿದ್ದ ಲಾರಿಯನ್ನು ನಾಲ್ವರ ತಂಡವೊಂದು ಅಡ್ಡಗಟ್ಟಿತ್ತು. ಲಾರಿಯಲ್ಲಿದ್ದ ತ್ಯಾಜ್ಯ ನೀರು ರಸ್ತೆಗೆ ಹರಿದು ದುರ್ನಾತ ಬೀರುತ್ತಿದೆ ಎಂದು ಲಾರಿ ಚಾಲಕನನ್ನು ತರಾಟಗೆ ತೆಗೆದುಕೊಂಡು ತಂಡ ಚಾಲಕನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು.  ಈ ಸಂದರ್ಭ ಚಾಲಕನ ಜೇಬಿನಲ್ಲಿದ್ದ ಹಣವನ್ನು ಬಲಾತ್ಕಾರವಾಗಿ ಕಸಿದು ತಂಡ ಪರಾರಿಯಾಗಿದೆ.

ಅಷ್ಟರಲ್ಲಿ ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಆರೋಪಿಗಳು ಪರಾರಿಯಾಗಿದ್ದರು. ಆದರೆ ಒಬ್ಬ ಆರೋಪಿಯನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ.  ಬಂಧಿತ ಆರೋಪಿಯಿಂದ 600 ರೂ ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿರುವ ಮೂವರಿಗೆ ಬಲೆ ಬೀಸಲಾಗಿದೆ.