`ಸ್ಟಂಪ್ ಎತ್ತಿ ಕೊಹ್ಲಿಗೆ ಇರಿಯುವಂತಾಗಿತ್ತು’

18 ಟೆಸ್ಟುಗಳಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸಿರುವ ಕೊವಾನ್ ಸ್ವತಃ ಕೊಹ್ಲಿ ಆಟದ ದೊಡ್ಡ ಅಭಿಮಾನಿ ಎಂದೂ ಹೇಳಿಕೊಂಡಿದ್ದಾರೆ.

ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಜೊತೆಗೆ ನಡೆದ ಜಗಳವನ್ನು ನೆನಪಿಸಿಕೊಂಡಿರುವ ಆಸ್ಟ್ರೇಲಿಯ ಮಾಜಿ ಓಪನರ್ ಎಡ್ ಕೊವಾನ್, “ಒಮ್ಮೆ ಸ್ಟಂಪ್ ಎತ್ತಿ ವಿರಾಟ್ ಕೊಹ್ಲಿಗೆ ಇರಿಯುವಷ್ಟು ಕೋಪ ಬಂದಿತ್ತು ; ವಿರಾಟ್ ಕೊಹ್ಲಿ ಕೆಟ್ಟ ಮಾತನ್ನು ಆಡಿದ್ದು ನೋಡಿ ಸಿಟ್ಟಾಗಿದ್ದೆ” ಎಂದು ಹೇಳಿದ್ದಾರೆ.

ಇತ್ತೀಚೆಗೆ ಮುಗಿದಿರುವ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಟೆಸ್ಟ್ ಪಂದ್ಯವನ್ನು ಭಾರತ 2-1ರಿಂದ ಗೆದ್ದುಕೊಂಡಿದೆ. ಈ ನಾಲ್ಕು ಪಂದ್ಯಗಳ ಸರಣಿ ಇತ್ತೀಚೆಗಿನ ವರ್ಷಗಳಲ್ಲಿ ಭಾರತ ಕಂಡ ಅತೀ ಕಠಿಣ ಸ್ಪರ್ಧೆಯಾಗಿತ್ತು. ಗರಿಷ್ಠ ಗುಣಮಟ್ಟದ ಕ್ರಿಕೆಟ್ ಆಟ ಪ್ರದರ್ಶನವಾಗಿದ್ದು ಒಂದು ಕಡೆಯಾಗಿದ್ದರೆ, ವಿವಾದಗಳೂ ಸುದ್ದಿಯಾಗಿದ್ದವು. ಎರಡೂ ತಂಡಗಳ ಕಪ್ತಾನರಾದ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಪರಸ್ಪರರ ಮೇಲೆ ದೂರು ನೀಡಿ ಬಿರುಗಾಳಿ ಎಬ್ಬಿಸಿದ್ದರು. ಈ ಹಿನ್ನೆಲೆಯಲ್ಲಿ ಕೊವಾನ್ ತಮ್ಮ ಹಿಂದಿನ ಅನುಭವವನ್ನು ಹೇಳಿಕೊಂಡಿದ್ದಾರೆ.

“ಆ ಸರಣಿಗಳ ಪಂದ್ಯವೊಂದರಲ್ಲಿ ನನಗೆ ಬಹಳ ಕೆಟ್ಟ ಅನುಭವವಾಗಿತ್ತು. ಕೊಹ್ಲಿ ನನಗೆ ಕೆಟ್ಟ ಪದವೊಂದನ್ನು ಬಳಸಿದ್ದರು. ಅವರು ಏನು ಹೇಳಿದ್ದರು ಎನ್ನುವುದು ಅನುವಾದದಲ್ಲಿ ಮಹತ್ವ ಕಳೆದುಕೊಂಡು ಹೋಗಿತ್ತು. ಆದರೆ ಅವರು ಅತೀ ಅನಗತ್ಯ ಶಬ್ದದ ಬಳಕೆ ಮಾಡಿದ್ದರು. ಖಾಸಗಿ ವಿಷಯಗಳು ಅತೀ ಸಂವೇದನಾಶೀಲ ಮತ್ತು ಅನಗತ್ಯ. ಆದರೆ ಅಂಪೈರ್ ಬಂದು “ವಿರಾಟ್ ನೀನು ಮಿತಿ ಮೀರಿ ನಡೆದುಕೊಂಡೆ” ಎಂದು ಹೇಳುವವರೆಗೂ ಆತನಿಗೆ ತಾನು ಮಿತಿಮೀರಿ ಮಾತನಾಡುತ್ತಿದ್ದೇನೆ ಎಂಬ ಅರಿವೇ ಇರಲಿಲ್ಲ. ಒಮ್ಮೆ ಅಂಪೈರ್ ಹೇಳಿದ ಮೇಲೆ ಆತ ಹಿಂದೆ ಹೆಜ್ಜೆ ಇಟ್ಟು ಕ್ಷಮೆಯಾಚಿಸಿದ್ದರು” ಎಂದು ಕೊವಾನ್ ವಿವರಿಸಿದ್ದಾರೆ.

“ಆದರೆ ಕೊಹ್ಲಿಯ ಮಾತುಗಳನ್ನು ಕೇಳುತ್ತಿದ್ದ ಕ್ಷಣವೊಂದರಲ್ಲಿ ನನಗೆ ಅಲ್ಲಿದ್ದ ಸ್ಟಂಪ್ ಎತ್ತಿ ಆತನಿಗೆ ಚುಚ್ಚಿಬಿಡಬೇಕು ಎನ್ನುವಷ್ಟು ಕೋಪ ಬಂದಿತ್ತು” ಎಂದು ಕೊವಾನ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ದ್ವಿತೀಯ ಟೆಸ್ಟಿನಲ್ಲಿ ಡಿಸಿಶನ್ ರಿವ್ಯೂ ಸಿಸ್ಟಂ ನಾಟಕೀಯ ಬೆಳವಣಿಗೆಯ ನಂತರ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯದ ಕಪ್ತಾನ ಸ್ಮಿತ್ ಅವರನ್ನು ‘ವಂಚಕ’ ಎಂದು ಕರೆದ ನಂತರ ಆಸ್ಟ್ರೇಲಿಯ ಕ್ರಿಕೆಟಿಗರು ಕೊಹ್ಲಿ ಮೇಲೆ ವಾಗ್ದಾಳಿಗಳನ್ನೇ ಮಾಡುತ್ತಿದ್ದಾರೆ.

ಆದರೆ 18 ಟೆಸ್ಟುಗಳಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸಿರುವ ಕೊವಾನ್ ಸ್ವತಃ ಕೊಹ್ಲಿ ಆಟದ ದೊಡ್ಡ ಅಭಿಮಾನಿ ಎಂದೂ ಹೇಳಿಕೊಂಡಿದ್ದಾರೆ. “ಕೊಹ್ಲಿ ಆಡುವ ಕ್ರಿಕೆಟಿನ ದೊಡ್ಡ ಅಭಿಮಾನಿ ನಾನು. ನನ್ನ ಮಾತುಗಳಿಂದ ತಪ್ಪು ತಿಳಿದುಕೊಳ್ಳಬೇಡಿ. ಆತ ಒಬ್ಬ ಅದ್ಭುತ ಆಟಗಾರ. ಆಸ್ಟ್ರೇಲಿಯ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಕೊಹ್ಲಿ ಜೊತೆಗೆ ನನಗೆ ಆದ ಸಣ್ಣ ಅನುಭವವನ್ನಷ್ಟೇ ನಾನು ಹೇಳಿದೆ. ಅಂಪೈರ್ ಮಧ್ಯಪ್ರವೇಶಿಸಿದ ನಂತರ ಸರಿಯಾಗಿತ್ತು” ಎಂದೂ ಅವರು ನುಡಿದರು. “ಇಂಗ್ಲಿಷ್ ಭಾರತೀಯರ ಪ್ರಥಮ ಭಾಷೆಯಲ್ಲ ಎನ್ನುವುದನ್ನು ಮರೆತು ಅವರು ಹಿಂದಿಯಲ್ಲಿ ಏನೋ ಬೊಗಳಿದ್ದಾರೆ ಎಂದು ಸಿಟ್ಟಾಗುವುದೂ ಸರಿಯಲ್ಲ” ಎಂದೂ ಕೊವಾನ್ ಹೇಳಿದ್ದಾರೆ.