ಹಳೆಯ ಮಾದರಿಯ ಆರಕ್ಷಣ ನೀತಿ ಇಂದಿಗೆ ಒಗ್ಗುವುದಿಲ್ಲ

ಸಾಂದರ್ಭಿಕ ಚಿತ್ರ

ಕಲಬುರ್ಗಿ ಹಂತಕರಂತೆ ಗೌರಿ ಲಂಕೇಶ್ ಹಂತಕರೂ

ಸಹ ಕಾನೂನಿನ ಕಣ್ತಪ್ಪಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.

  • ಆಕರ್ ಪಟೇಲ್

ಕಳೆದ ಮೂವತ್ತು ವರ್ಷಗಳಲ್ಲಿ ಭಾರತದ ನಗರಗಳು ಸಾಕಷ್ಟು ಬದಲಾಗಿವೆ. ಪರಿಣಾಮ ಪೊಲೀಸರ ಕಾರ್ಯವೈಖರಿಯೂ ಬದಲಾಗಿದೆ. ಇಲ್ಲಿ ನಗರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಅಥವಾ ಜನಸಂದಣಿಯ ಕಷ್ಟವನ್ನು ಪ್ರಸ್ತಾಪಿಸುತ್ತಿಲ್ಲ. ನಗರಗಳ ಮೂಲ ವಿನ್ಯಾಸ ಹೇಗಿತ್ತು, ಈಗ ಹೇಗಾಗಿದೆ ಎನ್ನುವುದನ್ನು ಹೇಳುತ್ತಿದ್ದೇನೆ.

ಭಾರತ ಒಂದು ಪ್ರಾಚೀನ ದೇಶವಾದರೂ ಇಲ್ಲಿನ ಪ್ರಮುಖ ನಗರಗಳು ಇತ್ತೀಚಿನ ಶತಮಾನಗಳದ್ದು. ಮುಂಬಯಿ, ಕೊಲ್ಕತ್ತಾ ಮತ್ತು ಚೆನ್ನೈ ನಗರಗಳನ್ನು ಬ್ರಿಟೀಷರು 300 ವರ್ಷಗಳ ಹಿಂದೆ ನಿರ್ಮಿಸಿದ್ದರು. ಹೈದರಾಬಾದ್, ಸೂರತ್, ಅಹಮದಾಬಾದ್ ನಗರಗಳಿಗೆ 200 ವರ್ಷಗಳಾಗಿವೆ. ಈಗ ದೆಹಲಿ ಎಂದು ಹೇಳಲಾಗುವ ಶಹಜಹಾನಾಬಾದ್ 400 ವರ್ಷಗಳನ್ನು ಪೂರೈಸಿದೆ. ಕಾಶಿ ಅತ್ಯಂತ ಪ್ರಾಚೀನ ನಗರ ಆಗಿದ್ದರೂ ಬಹುಪಾಲು ಕಾಶಿ ಹೊಸದಾಗಿ ನಿರ್ಮಾಣವಾಗಿದೆ. 500 ವರ್ಷಕ್ಕೂ ಹಳೆಯ ಯಾವುದೇ ಸ್ಮಾರಕವನ್ನು ಕಾಣಲಾಗುವುದಿಲ್ಲ.

ಆದರೆ ರೋಮ್ ನಗರದಲ್ಲಿ 2000 ವರ್ಷಗಳ ಹಳೆಯ ಸ್ಮಾರಕಗಳು ಇಂದಿಗೂ ಸುಸ್ಥಿರವಾಗಿವೆ. ಭಾರತದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಕೆಲವು ವರ್ಷಗಳ ಕಾಲ ನಗರದಿಂದ ದೂರ ಇದ್ದು ಮರಳಿದರೆ ನಗರಗಳ ವಿನ್ಯಾಸವೇ ಬದಲಾಗಿರುತ್ತದೆ. ನಾವು ಜನಿಸಿದ ಮನೆಯನ್ನು ಹುಡುಕಲು ಗೂಗಲಿನಲ್ಲಿ ಹುಡುಕಾಡಬೇಕಾಗುತ್ತದೆ.

ಇಲ್ಲಿ ಪೊಲೀಸಗಿರಿಯ ಪ್ರಸ್ತಾಪ ಉಚಿತ ಎನಿಸುತ್ತದೆ. ಒಂದು ಕಾಲದಲ್ಲಿ ಅಪರಾಧಗಳನ್ನು ತಡೆಗಟ್ಟಲು ಸ್ಥಳೀಯ ಪೊಲೀಸ್ ಠಾಣೆಯೇ ಸಾಕಾಗುತ್ತಿತ್ತು. ಶಂಕಿತ ಮತ್ತು ನಿರೂಪಿತ ಅಪರಾಧಿಗಳ ಫೋಟೋಗಳನ್ನು ಪೊಲೀಸ್ ಠಾಣೆಯಲ್ಲಿ ಸದಾ ಪ್ರದರ್ಶಿಸಲಾಗುತ್ತಿತ್ತು. ಆದರೆ ಆಧುನಿಕ ನಗರಗಳಲ್ಲಿ ಜನರ ಚಲನೆ ತೀವ್ರವಾಗುತ್ತಿದ್ದು, ಮನೆಗಳನ್ನು ಬದಲಿಸುವುದು, ಬಡಾವಣೆಗಳನ್ನು ಬದಲಿಸುವುದು ಸಾಮಾನ್ಯವಾಗಿದೆ. ಆದರೆ ನಮ್ಮ ಪೊಲೀಸ್ ವ್ಯವಸ್ಥೆ ಹಿಂದಿನಂತೆಯೇ ನಡೆಯುತ್ತಿದೆ.

ಇಂದಿಗೂ ಮಧ್ಯಮ ವರ್ಗಗಳ ಕುಟುಂಬದಲ್ಲಿ ನಡೆಯುವ ಕಳವು ಪ್ರಕರಣ ಪರಿಹರಿಸಲು ಮನೆಗೆಲಸದವರನ್ನು ಬಂಧಿಸಿ ಹಿಂಸಿಸಿ ಒಪ್ಪಿಸಲಾಗುತ್ತದೆ. ಗೌರಿ ಹತ್ಯೆಯ ನಂತರವೂ ಅದೇ ಜಾಗದಲ್ಲಿ ಜನರು ಸಾಮಾನ್ಯವಾಗಿ ಓಡಾಡಿಕೊಂಡಿದ್ದುದನ್ನು ಹಲವರು ಕಂಡಿದ್ದಾರೆ. ಇಂತಹ ಸ್ಥಳಗಳಲ್ಲಿ ಎಂತಹ ಸಾಕ್ಷಿ ಗುರುತು ಇರಲು ಸಾಧ್ಯ ? ಮತ್ತೊಂದೆಡೆ ಪೊಲೀಸರಿಗೆ ಅಪರಾಧಿಗಳ ಬಗ್ಗೆ ಮಾಹಿತಿ ನೀಡುವವರ ಸಂಖ್ಯೆ ಕ್ಷೀಣಿಸಿದೆ. ಅಪರಾಧಿ ಲೋಕದಿಂದಲೇ ಬಂದಿರುವ ಕೆಲವರು ಈ ರೀತಿ ಮಾಹಿತಿ ಒದಗಿಸುತ್ತಾರೆ. ಆದರೆ ಇಂದು ಇದು ಇಲ್ಲವಾಗಿದೆ. ಬಾಬ್ರಿ ಮಸೀದಿ ಧ್ವಂಸ, ಮುಂಬಯಿ ಮತ್ತು ಸೂರತ್ ಕೋಮು ಗಲಭೆಗಳು ಮತ್ತು ಬಾಂಬ್ ಸ್ಫೋಟಗಳ ನಂತರ ಪೊಲೀಸರಿಗೆ ಮಾಹಿತಿದಾರರು ಇಲ್ಲವಾಗಿದ್ದಾರೆ. ಕೋಮು ವಿಭಜನೆ ಪೊಲೀಸ್ ಕಾರ್ಯವೈಖರಿಯನ್ನೂ ಬಾಧಿಸಿದ್ದು ಯಾವುದೇ ಭಯೋತ್ಪಾದಕ ಕೃತ್ಯದ ತನಿಖೆ ಪೂರ್ಣವಾಗುವುದಿಲ್ಲ.

1996ರಲ್ಲಿ ಮಾದಕ ದ್ರವ್ಯ ಮಾಫಿಯಾ ದೊರೆ ಇಕ್ಬಾಲ್ ಮಿರ್ಚಿಯ ಪರ ವಾದಿಸಲು ಶ್ಯಾಂ ಕೇಸ್ವಾನಿ ಎಂಬ ವಕೀಲರು ವಕಾಲತ್ತು ವಹಿಸಿದ್ದರು. ಸಿಬಿಐ ಪರವಾಗಿ ನಾಲ್ವರು ವಕೀಲರು ಹಾಜರಾಗಿದ್ದರು. 200 ಪುಟಗಳ ಚಾರ್ಜಷೀಟಿನಲ್ಲಿ ಆರೋಪಿ ಇಕ್ಬಾಲ್ ಹೆಸರು ಒಮ್ಮೆ ಮಾತ್ರ ಪ್ರಸ್ತಾಪವಾಗಿತ್ತು. ಇದು ಭಾರತದ ಪೊಲೀಸ್ ಕಾರ್ಯವೈಖರಿ. ಇಕ್ಬಾಲ್ ಇಂದಿಗೂ ಬ್ರಿಟನ್ನಿನಲ್ಲಿದ್ದಾನೆ. ಇದು ಪೊಲೀಸರ ಹೊಣೆಗಾರಿಕೆ ಅಲ್ಲ. ಭಾರತದ ಪೊಲೀಸರು ಶ್ರಮವಹಿಸಿದ ನಿಷ್ಠೆಯಿಂದ ದುಡಿಯುತ್ತಿದ್ದಾರೆ. ಆದರೆ ನಮ್ಮ ಪೊಲೀಸ್ ವ್ಯವಸ್ಥೆ ಇನ್ನೂ ಪುರಾತನ ಕಾಲದಲ್ಲಿದೆ. ಹಾಗಾಗಿಯೇ ಭಾರತದಲ್ಲಿ ಶಿಕ್ಷೆಗೊಳಗಾಗುವ ಆರೋಪಿಗಳ ಪ್ರಮಾಣ ಶೇ 50ಕ್ಕಿಂತಲೂ ಕಡಿಮೆ ಇದೆ. ಅತ್ಯಂತ ಹೀನ ಅಪರಾಧ ಎಸಗುವವರೂ ಭಾರತದಲ್ಲಿ ಸುಲಭವಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ. ಈ ದೃಷ್ಟಿಯಿಂದ ನೋಡಿದಾಗ ಕಲಬುರ್ಗಿ ಹಂತಕರಂತೆ ಗೌರಿ ಲಂಕೇಶ್ ಹಂತಕರೂ ಸಹ ಕಾನೂನಿನ ಕಣ್ತಪ್ಪಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.