ಮಕ್ಕಳ ಶೈಕ್ಷಣಿಕ ಜೀವನ ಬದಲಾಯಿಸಿದ ಐಎಎಸ್

ತರಗತಿಯಲ್ಲಿ ಅಡಿಗೆಯವನ ಮಗಳು ಮತ್ತು ರಾಜಕುಮಾರ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುವುದು ಒಂದು ಚಲನಚಿತ್ರದ ಕಥೆಯಂತೆ ಭಾಸವಾಗಬಹುದು. ಆದರೆ ಛತ್ತೀಸಗಢದ ರಾಜಧಾನಿ, ರಾಯಪುರದಲ್ಲಿ ಜಾಹ್ನವಿಯಂತಹ ಹಲವಾರು ಮಕ್ಕಳ ಜೀವನದಲ್ಲಿ ಇದು ನಿಜವಾಗಿದೆ. ಸಾಮಾನ್ಯವಾಗಿ ಶ್ರೀಮಂತ ಕುಟುಂಬದ ಮಕ್ಕಳನ್ನೇ ದಾಖಲಿಸಿಕೊಳ್ಳುತ್ತಿದ್ದ ರಾಯಪುರದ ರಾಜಕುಮಾರ್ ಕಾಲೇಜಿನಲ್ಲಿ ಈಗ ತಿಂಗಳಿಗೆ 9000 ರೂಪಾಯಿ ವೇತನ ಪಡೆಯುವ ಅಡಿಗೆಯವನ ಮಗಳಾದ ಜಾಹ್ನವಿಗೂ ದಾಖಲಾತಿ ಸಿಕ್ಕಿದೆ. ರಾಯಪುರ ಜಿಲ್ಲೆಯಲ್ಲಿ 9000ಕ್ಕಿಂತಲೂ ಅಧಿಕ ಬಡಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ದಾಖಲಾತಿ ಸಿಕ್ಕಿದೆ.ಈ ಬದಲಾವಣೆಗಳಿಗೆ ಮೂಲಕಾರಣ ರಾಯಪುರ ಜಿಲ್ಲೆಯ ಯುವ ಜಿಲ್ಲಾಧಿಕಾರಿ ಓಂ ಪ್ರಕಾಶ್ ಚೌಧರಿ.

“2016 ಎಪ್ರಿಲಿನಲ್ಲಿ ನಾನು ಚಾರ್ಜ್ ತೆಗೆದುಕೊಂಡಾಗ ಶಾಲೆಗಳು ಆಗಷ್ಟೇ ಪುನರಾರಂಭಗೊಂಡಿದ್ದವು. ಬಡಮಕ್ಕಳನ್ನು ತಮ್ಮ ಶಾಲೆಗೆ ದಾಖಲಿಸದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಭ್ರಷ್ಟಾಚಾರ ನಡೆಸುವುದನ್ನು ಗಮನಿಸಿದೆ” ಎಂದು ಚೌಧರಿಯವರು ಹೇಳುತ್ತಾರೆ.

ಮಕ್ಕಳ ಶಿಕ್ಷಣದ ಹಕ್ಕು ಕಾನೂನಿನ ಪ್ರಕಾರ ಶೇ 25 ಸ್ಥಾನಗಳನ್ನು ಬಡಮಕ್ಕಳಿಗೆ ಮೀಸಲಿಡಬೇಕೆಂದು ಹೇಳಿದರೂ, ಹಲವು ಖಾಸಗಿ ಶಾಲೆಗಳು ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿದವು. ಆರ್ಟಿಇ ದಾಖಲಾತಿ ಸಂಖ್ಯೆ ಹೆಚ್ಚಿದರೂ, ಅದರಲ್ಲಿ ನಿಜವಾಗಿ ಬಡಮಕ್ಕಳು ಎಷ್ಟಿದ್ದರೆಂಬುದನ್ನು ಶಾಲೆಗಳು ಬಹಿರಂಗಪಡಿಸಿರಲಿಲ್ಲ.

ಇದನ್ನು ಮನಗಂಡ ಚೌಧರಿಯವರು ಶಿಕ್ಷಣದ ಹಕ್ಕು ಕಾನೂನಿನ ಪ್ರಕಾರದ ದಾಖಲಾತಿಯಲ್ಲಿ ಪಾರದರ್ಶಕತೆಯನ್ನು ತರಲು ನಿರ್ಧರಿಸಿದರು. ಇದಕ್ಕೋಸ್ಕರ “ಮಕ್ಕಳ ಶಿಕ್ಷಣದ ಹಕ್ಕು ಪಾರದರ್ಶಿ” ಯೋಜನೆಯನ್ನು ಜಾರಿಗೆ ತಂದು ಆನ್ಲೈನಿನಲ್ಲಿ ಅರ್ಜಿ ಸಲ್ಲಿಸಲು ಹೇಳಿದರು.

ಕಳೆದ ವರ್ಷ ಮಕ್ಕಳ ಶಿಕ್ಷಣದ ಹಕ್ಕು ಕಾನೂನಿನ ಪ್ರಕಾರ ಇಲ್ಲಿ 2,800 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಆದರೂ ಪ್ರತಿಷ್ಠಿತ ಸಂಸ್ಥೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುವ ಬಡ ಪೋಷಕರ ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ.

LEAVE A REPLY