ಡಿಜಿಪಿ ಹುದ್ದೆಗೆ ಕಿಶೋರ್ ಚಂದ್ರ ನೇಮಕಕ್ಕೆ ಒಕ್ಕಲಿಗ ಸಚಿವರ ಒತ್ತಡ

ಬೆಂಗಳೂರು : ರಾಜ್ಯದ ಮುಂದಿನ ಪೊಲೀಸ್ ಮಹಾನಿರ್ದೇಶಕರಾಗಿ ರೂಪಕ್ ಕುಮಾರ್ ದತ್ತಾ ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಎಚ್ ಸಿ ಕಿಶೋರ್ ಚಂದ್ರ ಅವರ ನೇಮಕಾತಿ ಆಗುವ ಎಲ್ಲಾ ಸಾಧ್ಯತೆಯಿದೆ. ದತ್ತಾ ಅವರು ಈ ತಿಂಗಳಾಂತ್ಯಕ್ಕೆ ನಿವೃತ್ತರಾಗಲಿದ್ದಾರೆ.

ಮೂಲಗಳ ಪ್ರಕಾರ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಎಲ್ಲಾ ಒಕ್ಕಲಿಗ ಸಚಿವರೂ ಕಿಶೋರ್ ಚಂದ್ರ ಅವರೇ ಮುಂದಿನ ಡಿಜಿಪಿ ಆಗಬೇಕೆಂದು ಪಟ್ಟು ಹಿಡಿದಿದ್ದಾರೆ. ಕಿಶೋರ್ ಚಂದ್ರ ಅವರು ಸದ್ಯ ಸಿಐಡಿಯ ಡಿಜಿಪಿ ಆಗಿದ್ದಾರೆ.

ಕಿಶೋರ್ ಚಂದ್ರ ಅವರು ಕನ್ನಡಿಗರಾಗಿರುವುದರಿಂದ ಅವರ ನೇಮಕಾತಿಯಿಂದ ಪಕ್ಷ ತಾನೊಬ್ಬ ಕನ್ನಡಿಗ ಐಪಿಎಸ್ ಅಧಿಕಾರಿಯನ್ನು ಅತ್ಯುನ್ನತ ಪೊಲೀಸ್ ಹುದ್ದೆಗೆ ಕೂರಿಸಿದ ವಿಚಾರವನ್ನು ಮುಂದಿನ ಚುನಾವಣೆ ವೇಳೆ ಹೇಳಿಕೊಳ್ಳುವ ಅವಕಾಶ ಪಡೆಯಬಹುದು ಎಂದು ಒಕ್ಕಲಿಗ ಸಮುದಾಯಕ್ಕೆ ಸೇರಿದ ಪ್ರಮುಖ ಸಚಿವರಾದ ಡಿ ಕೆ ಶಿವಕುಮಾರ್ ಹಾಗೂ ಟಿ ಬಿ ಜಯಚಂದ್ರ ಸಹಿತ ನಗರಾಭಿವೃದ್ಧಿ ಸಚಿವ ಆರ್ ರೋಶನ್ ಬೇಗ್ ಸಭೆಯಲ್ಲಿ ಅಭಿಪ್ರಾಯಪಟ್ಟರೆಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಮ್ಮ ಮೈಸೂರು ಜಿಲ್ಲೆಯವರೇ ಆದ ಕಿಶೋರ್ ಚಂದ್ರ ಅವರ ನೇಮಕಾತಿ ಮಾಡುವಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದಾರೆಎನ್ನಲಾಗಿದೆ.

ಡಿಜಿಪಿ ಹುದ್ದೆಗೆ ಕಿಶೋರ್ ಚಂದ್ರ ಅವರ ಹೊರತಾಗಿ ಸಿಐಡಿ ಡಿಜಿಪಿ ಎಂ ಎನ್ ರೆಡ್ಡಿ  ಹಾಗೂ ಇನ್ನೊಬ್ಬ ಹಿರಿಯ ಐಪಿಎಸ್ ಅಧಿಕಾರಿ ನೀಲಮಣಿ ಎಸ್ ರಾಜು ಅವರ ಹೆಸರುಗಳು ಕೇಳಿ ಬಂದಿದ್ದರೂ ನೀಲಮಣಿ ಅವರು ಕೇಂದ್ರ ಡೆಪ್ಯುಟೇಶನ್ನಿಗೆ ಹೆಚ್ಚಿನ ಒಲವು ತೋರಿಸಿದ್ದಾರೆನ್ನಲಾಗಿದೆ.