ಕಡಲು ಪ್ರಕ್ಷುಬ್ಧ : ಐಬಿಸ್ ಬಾರ್ಜಿನಿಂದ ಇಂಧನ ತೆಗೆಯುವ ಕಾರ್ಯ ವಿಳಂಬ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಉಳ್ಳಾಲ ತೀರದಲ್ಲಿ ಕಡಲು ಕೊರೆತ ತಡೆ ಕಾಮಗಾರಿಯಲ್ಲಿ ನಿರತವಾಗಿದ್ದ ಸಂದರ್ಭ ಇತ್ತೀಚೆಗೆ ಅವಘಡಕ್ಕೀಡಾಗಿದ್ದ ಐಬಿಸ್ ಬಾರ್ಜಿನಲ್ಲಿರುವ ಇಂಧನವನ್ನು ಹೊರಕ್ಕೆ ತೆಗೆಯುವ ಕಾರ್ಯವು ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ವಿಳಂಬವಾಗಿದೆ.

ತೀವ್ರ ಗಾಳಿಯಿಂದಾಗಿ ಇಂಧನ ಹೊರತೆಗೆಯುವ ಕಾರ್ಯ ಸಾಧ್ಯವಾಗುತ್ತಿಲ್ಲ ಎಂದು ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಎಡಿಬಿಯ ಸುಸ್ಥಿರ ಕರಾವಳಿ ರಕ್ಷಣೆ ಮತ್ತು ನಿರ್ವಹಣಾ ಯೋಜನೆಯ ಜಂಟಿ ನಿರ್ದೇಶಕರು ಹಾಗೂ ಸುಪರಿಂಟೆಂಡಿಂಗ್ ಇಂಜಿನಿಯರ್ ಆಗಿರುವ ಗೋಪಾಲ್ ನಾಯ್ಕ್ ಹೇಳಿದ್ದಾರೆ.

ಈಗಾಗಲೇ ಮುಳುಗುತ್ತಿರುವ ಬಾರ್ಜ್ ಒಂದು ವೇಳೆ ಸಂಪೂರ್ಣ ಮುಳುಗಡೆಯಾದಲ್ಲಿ ಅದರ ಇಂಧನ ಟ್ಯಾಂಕ್ ಪತ್ತೆ ಹಚ್ಚುವುದು ಕಷ್ಟಕರವಾಗುವುದು ಎಂದು ಅವರು ತಿಳಿಸಿದರು. “ಬಾರ್ಜಿನಲ್ಲಿ ಸುಮಾರು 1,200 ಲೀಟರ್ ಡೀಸೆಲ್ ಇತ್ತು. ಇಲ್ಲಿಯ ತನಕ ಇಂಧನ ಸೋರಿಕೆಯಾಗಿಲ್ಲ. ಇಂಧನವನ್ನು ಜಾಗರೂಕತೆಯಿಂದ ಹೊರತೆಗೆಯುವುದೇ ನಮ್ಮ ಉದ್ದೇಶ ಎಂದು ಅವರು ಹೇಳಿದರು.

ಸಮುದ್ರ ಜುಲೈ ತನಕ ಪ್ರಕ್ಷುಬ್ಧವಾಗಿರುವ ಸಾಧ್ಯತೆಯಿರುವುದರಿಂದ ಅಲ್ಲಿಯ ತನಕ ಇಂಧನವನ್ನು ಹೊರತೆಗೆಯಲು ಸಾಧ್ಯವಾಗದು, ಸದ್ಯ ಈ ಡ್ರೆಡ್ಜಿಂಗ್ ಬಾರ್ಜಿನ ಒಂದೆರಡು ಕಂಪಾರ್ಟುಮೆಂಟುಗಳ ಒಳಗಷ್ಟೇ ನೀರು ಹೊಕ್ಕಿದೆ, ಸಾಗರ ಶಾಂತವಾದ ಕೂಡಲೇ ನೀರಿನಡಿಯಿಂದ ಬಾರ್ಜ್ ದುರಸ್ತಿ ಕಾರ್ಯ ಆರಂಭಗೊಳ್ಳುವುದು ಎಂದರು.

ಜೂನ್ 3ರಂದು 27 ಜನರನ್ನು ಹೊಂದಿದ್ದ ಐಬಿಸ್ ಬಾರ್ಜ್ ಬಂಡೆಯೊಂದಕ್ಕೆ ಬಡಿದು ಸಮುದ್ರ ಮಧ್ಯದಲ್ಲಿಯೇ ನಿಂತು ಬಿಟ್ಟಿದ್ದರೆ, ಅದರಲ್ಲಿರುವ ಎಲ್ಲರನ್ನೂ ಮರುದಿನ ಭಾರತೀಯ ಕೋಸ್ಟ್ ಗಾರ್ಡ್ ಮತ್ತು ತಟ ರಕ್ಷಣಾ ಪೊಲೀಸರ ಸಹಾಯದಿಂದ ರಕ್ಷಿಸಲಾಗಿತ್ತು.