ಅಪ್ರಾಪ್ತೆ ಮದುವೆ ರದ್ದು ಮಾಡಿದ ಅಧಿಕಾರಿಗಳು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಅಪ್ರಾಪ್ತೆಯ ಮದುವೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಅರಿತ ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸುವ ಮೂಲಕ ಕೆರೆಕಾಡಿನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಮದುವೆಯನ್ನು ರದ್ದುಗೊಳಿಸಿದ್ದಾರೆ.

ಇಲ್ಲಿನ ಬೆಳ್ಳಾಯರು ಗ್ರಾಮದ ಕೆರೆಕಾಡಿನ ಪರಿಶಿಷ್ಟ ಪಂಗಡದ ಕಾಲೊನಿಯಲ್ಲಿರುವ ಯುವಕನೊಂದಿಗೆ ಕಾರ್ಕಳ ಮೂಲದ ಬಾಲಕಿಯ ವಿವಾಹ ನಿಶ್ಚಯ ಮಾಡಲಾಗಿತ್ತು. ಆದರೆ ಇನ್ನೂ ಮದುವೆ ಪ್ರಾಯಕ್ಕೆ ಬಾರದ ಬಾಲಕಿಯನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಮದುವೆ ಮಾಡಿಕೊಡಲು ಎಲ್ಲಾ ಯೋಜನೆ ರೂಪಿಸಲಾಗಿತ್ತು. ಮದುವೆಯ ಆಮಂತ್ರಣ ಪತ್ರವನ್ನೂ ಹಂಚಲಾಗಿತ್ತು. ಕೆರೆಕಾಡಿನ ಮದುಮಗನ ಮನೆಯಲ್ಲಿ ವಿವಾಹಕ್ಕಾಗಿ ಎಲ್ಲಾ ಪೂರ್ವ ಸಿದ್ಧತೆಯೂ ನಡೆದಿತ್ತು.

ಆದರೆ ಈ ಬಗ್ಗೆ ಮಾಹಿತಿ ಪಡೆದ ಸಾಮಾಜಿಕ ಕಾರ್ಯಕರ್ತರೊಬ್ಬರು ಸಂಬಂಧಪಟ್ಟ ಇಲಾಖೆ ಹಾಗೂ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾ ಪಂ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಆಗಮಿಸಿ ಈ ಮದುವೆಯನ್ನು ನಡೆಸದಂತೆ ತಾಕೀತು ಮಾಡಿ, ಮದುವೆಯನ್ನು ರದ್ದು ಪಡಿಸಿದ್ದಾರೆ. ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ ಇದೇ ಗ್ರಾಮಕ್ಕೆ ಕೆಲವು ಸಮಯಗಳ ಹಿಂದೆ ಸಾಮಾಜಿಕ ಕಲ್ಯಾಣ ಸಚಿವ ಎಚ್ ಆಂಜನೇಯ ಬಂದ್ದಿದ್ದರು ಮತ್ತು ಇದೇ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು.

ಪಂಚಾಯತ್ ಕಚೇರಿಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯು ಆಯೋಜಿಸಿದ್ದ ವಿಚಾರಣೆ ಸಂದರ್ಭದಲ್ಲಿ ಮದುಮಗನಿಗೆ 26 ವರ್ಷವಾಗಿದ್ದು, ಬಾಲಕಿ ಕೇವಲ 16 ವರ್ಷದವಳು ಎಂದು ತಿಳಿಸಲಾಯಿತು. ಕಾರ್ಕಳ ಗ್ರಾಮಾಂತರ  ಪೊಲೀಸರು ಬಾಲಕಿಯ ಪೋಷಕರ ಹೇಳಿಕೆಗಳನ್ನು ಪಡೆದುಕೊಂಡರು. ಅಲ್ಲದೆ ಮದುವೆ ನಡೆಸದಂತೆ ಹಾಗೂ ಇದನ್ನು ರದ್ದುಪಡಿಸುವಂತೆ ಪೋಷಕರಿಗೆ ಎಚ್ಚರಿಕೆ ನೀಡಲಾಯಿತು.