ಎಂಎಲ್ಲೆ ಶಿಫಾರಸ್ಸುಗಳಿಗೆಲ್ಲ ಅಧಿಕಾರಿ ಎಸ್ ಎನ್ನಬೇಕಿಲ್ಲ

 ಅಭಯಚಂದ್ರ ಉವಾಚ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : “ಪಂಚಾಯತಿ ಅಧ್ಯಕ್ಷರು ಹೇಳಿದ ಕಡೆ ಕೊಳವೆಬಾವಿ ತೆಗಿಸಬೇಡಿ, ಎಂಎಲ್ಲೆ ಶಿಫಾರಸು ಮಾಡಿವರಿಗೆಲ್ಲಾ ಕೆಲಸ ಮಾಡಿ ಕೊಡಬೇಕಾಗಿಲ್ಲ. ನೈಜತೆಯನ್ನು ಅಧಿಕಾರಿಗಳು ಪರಿಶೀಲಿಸಿದ ನಂತರವೆ ಮುಂದಿನ ಕ್ರಮ ಕೈಗೊಳ್ಳಬೇಕು” ಎಂದು ಶಾಸಕ ಅಭಯಚಂದ್ರ ಜೈನ್ ಅಧಿಕಾರಿಗಳಿಗೆ ಸೂಚನೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಸೋಮವಾರ ತಹಶಿಲ್ದಾರ ಕಚೇರಿಯಲ್ಲಿ ನಡೆದ ಪಿಡಿಓಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಕೆಲವು ಪಂಚಾಯತಿಗಳಲ್ಲಿ ಕೊಳವೆಬಾವಿಗಳಿಗೆ ಜಾಗ ಗುರುತಿಸುವಾಗ ಉಂಟಾಗುತ್ತಿರುವ ರಾಜಕೀಯದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಅಭಯಚಂದ್ರ, “ಕೊಳವೆಬಾವಿಯ ನೀರು ಸುತ್ತಮುತ್ತಲಿನ ಹೆಚ್ಚು ಜನರಿಗೆ ಪ್ರಯೋಜನವಾಗುವಂತಿರಬೇಕು. ಆದ್ದರಿಂದ ಜಾಗ ಗುರುತಿಸುವಾಗ ಅಧಿಕಾರಿಗಳು ಜಾಗೃತೆ ವಹಿಸಿ, ಪಂಚಾಯತ ಅಧ್ಯಕ್ಷರು ಹೇಳಿದ ಕಡೆಯೆ ಕೊಳವೆಬಾವಿ ತೆಗೆಯಬೇಕಾಗಿಲ್ಲ” ಎಂದರು.

“ಎಂಎಲ್ಲೆ ಶಿಫಾರಸ್ಸು ಮಾಡಿದ ಎಲ್ಲ ಜನರಿಗೆ ನೀವು ಕೆಲಸ ಮಾಡಿಸಿಕೊಡಬೇಕಾಗಿಲ್ಲ. ಅದರಲ್ಲಿ ಅರ್ಹರನ್ನು ಗುರುತಿಸಿ ನ್ಯಾಯ ಕೊಡಿಸುವುದು ನಿಮ್ಮ ಕರ್ತವ್ಯ. ಅಕ್ರಮ ಸಕ್ರಮ ಸವಲತ್ತುಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಮಧ್ಯವತಿಗಳನ್ನು ದೂರವಿಡಬೇಕು” ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.