ಬಳ್ಕೂರಿನಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ : ಅಧಿಕಾರಿಗಳಿಂದ ಕ್ರಮ

ಸಾಂದರ್ಭಿಕ ಚಿತ್ರ

 

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : ತಾಲೂಕಿನ ಬಳ್ಕೂರು ವ್ಯಾಪ್ತಿಯ ಶರಾವತಿ ನದಿಯಲ್ಲಿ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪರವಾನಗಿಯನ್ನು ತಡೆಹಿಡಿದು ಕ್ರಮ ಜರುಗಿಸಿದ್ದಾರೆ.

ಸ್ಥಳೀಯರ ದೂರು ಆಧರಿಸಿ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಇಲಾಖೆ ಗುರುತಿಸಿದ ಮರಳು ಪಟ್ಟಿ ಮೀರಿ ಮರುಳು ಸಾಗಿಸುತ್ತಿದ್ದ ಯಾಂತ್ರಿಕೃತ ಡಿಂಗಿಗಳ ಜಿಪಿಎಸ್ ವಶಪಡಿಸಿಕೊಂಡು ಪರವಾನಗಿದಾರರ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಾರೆ. ಬಳ್ಕೂರಿನ ದಿನೇಶ ಗೋವಿಂದ ನಾಯ್ಕ, ಬಿ ವಿ ಥಾಮಸ್, ಸೈಮನ್ ರೋಡ್ರಿಗಿಸ್, ಶಿವಾನಂದ ಹೆಗಡೆ, ಶ್ರೀಧರ ನಾಯ್ಕ, ಶ್ರೀಧರ ಸಾತು ನಾಯ್ಕ, ಸುರೇಶ ಗೌಡ, ಜಲವಳ್ಳಿಯ ಬಾಲಕೃಷ್ಣ ಕಿಣಿ ಮತ್ತಿತರರು ನಿಯಮಾವಳಿಯನ್ನು ಗಾಳಿಗೆ ತೂರಿ ಮರಳು ಗಣಿಗಾರಿಕೆ ನಡೆಸುತ್ತಿರುವ ಕುರಿತು ಮಾಹಿತಿಯ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಿಯಮ ಮೀರಿ ಮರಳು ಗಣಿಗಾರಿಕೆ ನಡೆಸುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ನಸ್ರುಲ್ಲಾ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪರವಾನಗಿ ತಡೆಹಿಡಿದಿದ್ದಾರೆ.