ಆಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು ಕಂಗಾಲು

ಸೂಡಾ ಕೃಷಿಕರ ಜೀವನಾಡಿ ಅಣೆಕಟ್ಟು, ಅನೈತಿಕತೆಗೆ ಬಳಕೆಯಾಗುತ್ತಿದೆ ಎನ್ನಲಾದ ಹಲಗೆ ಶೇಖರಣಾ ಶೆಡ್

ಇನ್ನೂ ಅಣೆಕಟ್ಟು ಮುಚ್ಚದ್ದರಿಂದ ಸೂಡಾ ಪ್ರದೇಶದ ಸಾವಿರಾರು ಎಕ್ರೆ ಕೃಷಿ ಭೂಮಿಗೆ ನೀರಿಲ್ಲ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಸೂಡಾ ಗ್ರಾಮದ ಮದ್ಮಲ್ ಬೈಲ್ ಎಂಬಲ್ಲಿನ ಅಣೆಕಟ್ಟಿಗೆ ಕಳೆದ ನವಂಬರ್ ತಿಂಗಳಲ್ಲಿ ಅಣೆಕಟ್ಟು ಕಟ್ಟಿ ನೀರು ತಡೆಹಿಡಿಯಬೇಕಾಗಿದ್ದರೂ ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಇನ್ನೂ ನೀರು ತಡೆ ಹಿಡಿಯದ ಪರಿಣಾಮ ಇದೇ ನೀರನ್ನು ನಂಬಿ ಕೃಷಿ ಚಟುವಟಿಕೆ ನಡೆಸುತ್ತಿದ್ದ, ಸೂಡದಿಂದ ಕಲ್ಲಬೈಲ್ ವರೆಗಿನ ಸುಮಾರು ಸಾವಿರಕ್ಕೂ ಅಧಿಕ ಎಕ್ರೆ ಕೃಷಿ ಭೂಮಿ ಬರಡಾಗುವ ಸಾಧ್ಯತೆ ನಿಶ್ಚಳವಾಗಿದೆ ಎಂಬುದಾಗಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

4pdb2

“ಕಳೆದ 2001ರಲ್ಲಿ ಈ ಭಾಗದ ಅಗತ್ಯತೆಯನ್ನು ಮನಗಂಡ ಸಣ್ಣ ನೀರಾವರಿ ಇಲಾಖಾ ವತಿಯಿಂದ 20 ಲಕ್ಷ ರೂಪಾಯಿ ವೆಚ್ಚದ ಕಿರು ಅಣೆಕಟ್ಟನ್ನು ಗುತ್ತಿಗೆದಾರ ಸೂರ್ಯ ನಾರಾಯಣ ಶೆಟ್ಟಿ ನಿರ್ಮಿಸಿದ್ದು, ಪ್ರತೀ ವರ್ಷವೂ ಕಾಲಕಾಲಕ್ಕೆ ಅಣೆಕಟ್ಟಿನಲ್ಲಿ ನೀರನ್ನು ತಡೆಯಲಾಗುತ್ತಿದ್ದರಿಂದ ಕೃಷಿ ಚಟುವಟಿಕೆಗಳು ಸಾಂಗವಾಗಿ ನಡೆಯುತ್ತಿತ್ತು. ಇದೀಗ ಗುತ್ತಿಗೆ ವಹಿಸಿಕೊಂಡಿರುವ ಸ್ಥಳೀಯ ಬ್ರೆಟ್ ಗ್ರೂಫ್ ಎಂಬ ಸಂಸ್ಥೆ ಕಳೆದ ನವಂಬರಿನಲ್ಲಿ ಅಣೆಕಟ್ಟಿಗೆ ಹಲಗೆ ಹಾಕಿದೆಯಾದರೂ ಅದರ ಮಧ್ಯೆ ಮಣ್ಣು ತುಂಬಿಸದ ಪರಿಣಾಮ ನೀರು ಸರಾಗವಾಗಿ ಹರಿದು ಹೋಗಿದ್ದಲ್ಲದೆ ಇದೀಗ ನೀರಿನ ಹರಿವು ಕಡಿಮೆಯಾಗಿದ್ದರಿಂದ ಇನ್ನು ನೀರನ್ನು ತಡೆದರೂ ಯಾವುದೇ ಪ್ರಯೋಜನವಾಗದು” ಎಂಬುದಾಗಿ ಸ್ಥಳೀಯ ನಿವಾಸಿ ಕೃಷಿಕ ಹರೀಶ್ ಶೆಟ್ಟಿ ಹೇಳಿದ್ದಾರೆ.

ಈ ಬಗ್ಗೆ ಸ್ಥಳೀಯರು ಸಣ್ಣ ನೀರಾವರಿ ಇಲಾಖಾ ಅಧಿಕಾರಿಗೆ ಕರೆ ಮಾಡಿದಾಗ ಉತ್ತರಿಸಿದ ಅಧಿಕಾರಿ ಅರುಣ್ ಎಂಬವರು, “ನಾನು ಈ ಬಗ್ಗೆ ಗುತ್ತಿಗೆದಾರರಲ್ಲಿ ಕೇಳಿದ್ದಕ್ಕೆ ಕಣೆಕಟ್ಟು ಕಟ್ಟಲಾಗಿದೆ ಎಂದಿದ್ದು, ಮಣ್ಣು ಹಾಕಿದ ಫೋಟೋ ಕೂಡಾ ನನಗೆ ಕಳುಹಿಸಿದ್ದಾರೆ ಎಂಬುದಾಗಿ ಬೇಜವಾಬ್ದಾರಿಯಿಂದ ಉತ್ತರಿಸಿದ್ದಾರೆ. ಕೇವಲ ಕಚೇರಿಯಲ್ಲಿ ಕುಳಿತು ಗುತ್ತಿಗೆದಾರ ಕಳುಹಿಸಿದ ಫೋಟೋ ಆಧಾರದ ಮೇಲೆ ಬಿಲ್ ಮಾಡುವ ಮೂಲಕ ಸರ್ಕಾರದ ಹಣವನ್ನು ದುರುಪಯೋಗ ಮಾಡುತ್ತಿದ್ದಾರೆ” ಎಂದು ಆರೋಪಿಸಿದ ಸ್ಥಳೀಯ ಹರೀಶ್ ಶೆಟ್ಟಿ, “ಕೇವಲ ಮೂರು ಲೋಡ್ ಮಣ್ಣು ತಂದು ದಡದಲ್ಲಿ ಹಾಕಿದ್ದು ಬಿಟ್ಟರೆ, ಅಣೆಕಟ್ಟಿಗೆ ಮಣ್ಣು ತುಂಬಿಸಿಲ್ಲ. ಬೇರೆ ಯಾವುದೋ ಫೋಟೋ ಕೊಟ್ಟು ಅಧಿಕಾರಿಗಳ ಬೇಜವಾಬ್ದಾರಿಯನ್ನು ಗುತ್ತಿಗೆದಾರರು ದುರುಪಯೋಗಪಡಿಸಿಕೊಂಡಿದ್ದು, ಇಂತಹ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಶೆಡ್ ಅನೈತಿಕತೆಗೆ ಬಳಕೆ

“ನಮ್ಮ ಖಾಸಗಿ ಸ್ಥಳವನ್ನು ಯಾವುದೇ ರೀತಿಯ ಫಲಾಪೇಕ್ಷೆ ಇಲ್ಲದೆ ಅಣೆಕಟ್ಟಿನ ಹಲಗೆ ಇಡುವುದಕ್ಕಾಗಿ ಶೆಡ್ ನಿರ್ಮಿಸಲು ನಾವು ಬಿಟ್ಟು ಕೊಟ್ಟಿದ್ದೇವೆ. ಆದರೆ ಇದೀಗ ಅದರ ದುರವಸ್ಥೆ ನೋಡುವಾಗ ನಾಚಿಕೆ ಪಡುವಂತಾಗಿದೆ. ಆ ಶೆಡ್ಡಿಗೆ ಬಾಗಿಲಿದ್ದರೂ ಅದಕ್ಕೆ ಯಾವುದೇ ಬೀಗ ಅಳವಡಿಸದಿರುವುದರಿಂದ ಅದರೊಳಗೆ ಅನೈತಿಕ ಚಟುವಟಿಕೆಗಳು ನಡೆಯುವ ಸಾಧ್ಯತೆ ಇದೆ. ಅಲ್ಲದೆ ಅದರೊಳಗೆ ವಿವಿಧ ಅಮಲು ಪದಾರ್ಥಗಳ ಬಾಟಲುಗಳು ಸಿಗುತ್ತದೆ. ಸಂಪೂರ್ಣವಾಗಿ ಇದರ ನಿರ್ವಹಣೆಯನ್ನು ಇಲಾಖೆ ನಿರ್ಲಕ್ಷ್ಯ ಮಾಡಿದ್ದರಿಂದ ಈ ಶೆಡ್ ಮುಳ್ಳು ಪೊದೆಗಳಿಂದ ಆವೃತಗೊಂಡಿದ್ದು ಇಲಾಖೆಯ ಕಾರ್ಯದಕ್ಷತೆಯನ್ನು ಪ್ರಶ್ನೆಸುವಂತಿದೆ” ಎಂದು ಹರೀಶ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.