`ಅಧಿಕಾರಿ ನಿರ್ಲಕ್ಷ್ಯದಿಂದ 29 ಕೊರಗ ಕುಟುಂಬಗಳಿಗೆ ನಿವೇಶನ ವಿಳಂಬ’

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಉಡುಪಿ ಜಿಲ್ಲಾಡಳಿತ 29 ಕೊರಗ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಿದ್ದರೂ, ಅಧಿಕಾರಿಗಳು ಈ ಕುಟುಂಬಗಳಿಗೆ ಜಾಗ ಗುರುತಿಸುವಲ್ಲಿ ವಿಳಂಬ ಮಾಡಿದ್ದಾರೆಂದು ಮಾನವ ಹಕ್ಕುಗಳ ರಕ್ಷಣಾ ಒಕ್ಕೂಟದ ಉಡುಪಿ ಘಟಕಾಧ್ಯಕ್ಷ ರವೀಂದ್ರನಾಥ ಶಾನುಭಾಗ್ ಆರೋಪಿಸಿದರು.

ನಿವೇಶನ ಮಂಜೂರಾಗಿ ಏಳು ವರ್ಷವಾದರೂ ಅಧಿಕಾರಿಗಳು ಕೊರಗ ಕುಟುಂಬಗಳಿಗೆ ಜಾಗ ನೀಡುವಲ್ಲಿ ವಿಫಲರಾಗಿದ್ದಾರೆ. “ಅತ್ರಾಡಿ, ಅಂಬಾಗಿಲು, ಅಲೆವೂರು ಮತ್ತು ಎಲ್ಲೂರಿನಲ್ಲಿ 29 ಕೊರಗ ಕುಟುಂಬಗಳು ವಾಸಿಸುತ್ತಿವೆ. 2010ರಲ್ಲಿ ಈ ಕುಟುಂಬಗಳು ನಿವೇಶನ ಕೋರಿ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದವು. ಅಂತಿಮವಾಗಿ ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಹಿರಿಯಡ್ಕಕ್ಕೆ ಹತ್ತಿರದ ಬೊಮ್ಮರಬೆಟ್ಟು ಗ್ರಾಮದ ಕೊಂಕಾಡಿ ಪ್ರದೇಶದಲ್ಲಿ 2.61 ಎಕ್ರೆ ಜಾಗ ಮಂಜೂರು ಮಾಡಿತ್ತು” ಎಂದರು. 2011ರ ಸ್ವಾತಂತ್ರ್ಯೋತ್ಸವ ದಿನದಂದು ಕೊರಗ ಕುಟುಂಬಗಳಿಗೆ ಹಕ್ಕುಪತ್ರ ಹಂಚಲಾಗಿತ್ತು.

ಆದರೆ ಜಿಲ್ಲಾಡಳಿತ ಗುರುತಿಸಿದ ಜಾಗ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಕಾರಣ, ಕೊರಗ ಕುಟುಂಬಗಳು ಸಮಗ್ರ ಬುಡಕಟ್ಟು ಅಭಿವೃದ್ಧಿ ಪ್ರಾಜೆಕ್ಟ್ (ಐಟಿಡಿಪಿ) ಇಲಾಖೆ ಸಂಪರ್ಕಿಸಿದವು. ಬಳಿಕ ನಿರ್ದಿಷ್ಟ ಜಾಗ ಸಮತಟ್ಟುಗೊಳಿಸಲು ರಾಜ್ಯ ಸರ್ಕಾರ 1.5 ಲಕ್ಷ ರೂ ಮಂಜೂರು ಮಾಡಿರುವ ವಿಷಯ ತಿಳಿದು ಬಂತು. ಇದರಲ್ಲಿ 97 ಸಾವಿರ ರೂ ಬಿಡುಗಡೆಗೊಂಡಿತ್ತು. 2013ರಲ್ಲಿ ಈ ಯೋಜನೆಗೆ ಪುನಾ ಮೂರು ಲಕ್ಷ ರೂ ಮಂಜೂರಾಗಿತ್ತು.

“ಡೀಸಿ ಎಂ ಟಿ ರೇಜು ಅವರನ್ನು ಭೇಟಿಯಾಗಿದ್ದ ವೇಳೆ ಜಮೀನನನ್ನು ಕೊರಗ ಕುಟುಂಬಿಕರೇ ಸಮತಟ್ಟು ಮಾಡುವಂತೆ ಸೂಚಿಸಿದ್ದರು. ಅಂತೆಯೇ ಫಲಾನುಭವಿಗಳು ತಲಾ 50 ಸಾವಿರ ರೂ ಭರಿಸಿ ಆ ಕೆಲಸ ಮಾಡಿದ್ದರು. ಆದರೆ ಆ ಜಾಗವು ಇಳಿಜಾರಾಗಿರುವುದರಿಂದ ಸಮತಟ್ಟು ಕೆಲಸದಲ್ಲಿ ಯಶಸ್ವಿಯಾಗಿಲ್ಲ” ಎಂದು ಶಾನುಭಾಗ್ ತಿಳಿಸಿದರು.

ಎರಡು ವರ್ಷದ ಬಳಿಕ ಮಾನವ ಹಕ್ಕುಗಳ ಆಯೋಗ ಸಂಪರ್ಕಿಸಿದ್ದರು. “2015ರಲ್ಲಿ ಆಯೋಗ ನೀಡಿದ ನಿರ್ದೇಶನದಂತೆ ಆಗಿನ ಡೀಸಿ ವಿಶಾಲ್ ಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ಫಲಾನುಭವಿಗಳು ಕೆಲವು ತಿಂಗಳ ಹಿಂದೆ ಎಚ್ ಆರ್ ಪಿ ಎಫ್ ಸಂಪರ್ಕಿಸಿದ್ದಾರೆ” ಎಂದರು.

ಮಣಿಪಾಲ ವಿ ವಿ ಸ್ವಯಂ-ಸೇವಾ ಕಾರ್ಯಕರ್ತರ ನೆರವು ಪಡೆದ ಎಚ್ ಆರ್ ಪಿ ಎಫ್ ಭಾನುವಾರ ಜಾಗದ ಸಮತಟ್ಟು ಮಾಡಿದೆ. ಕೊರಗ ಕುಟುಂಬಗಳು ನಿವೇಶನ ಪಡೆಯಲು ಇಷ್ಟು ವರ್ಷ ಕಾಯಬೇಕಾಗಿರುವುದು ಮತ್ತು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ ಮೊತ್ತ ಎಲ್ಲಿಗೆ ಹೋಯಿತು ಎಂದು ಜಿಲ್ಲಾಡಳಿತಕ್ಕೆ ಶಾನುಭಾಗ್ ಪ್ರಶ್ನಿಸಿದ್ದಾರೆ.