ಕಲಬುರ್ಗಿ : ದಿಟ್ಟ ಅಧಿಕಾರಿ ಎಚ್ಚರಿಕೆಗೆ ಬೆದರಿ ತಾವೇ ಅತಿಕ್ರಮಣ ತೆರವುಗೊಳಿಸುತ್ತಿರುವ ಕಟ್ಟಡ ಮಾಲಕರು

ಸಾಂದರ್ಭಿಕ ಚಿತ್ರ

ಕಲಬುರ್ಗಿ : ಕಟ್ಟಡ ನಿರ್ಮಾಣ ಮಾಡುವಾಗ ನಿಯಮ ಉಲ್ಲಂಘಿಸಿದವರ ವಿರುದ್ಧ ತಾವು ಬೀದರ್ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಕೈಗೊಂಡ ನಿರ್ದಾಕ್ಷಿಣ್ಯ ಕ್ರಮಗಳನ್ನು ಕಲಬುರ್ಗಿಯಲ್ಲೂ ಮುಂದುವರಿಸುವುದಾಗಿ ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಅವರು ನೀಡಿದ ಎಚ್ಚರಿಕೆ ಅಕ್ರಮ ಅಪಾರ್ಟಮೆಂಟ್ ಹಾಗೂ ವಾಣಿಜ್ಯ ಕಾಂಪ್ಲೆಕ್ಸ್ ಮಾಲಕರಿಗೆ ನಡುಕ ಹುಟ್ಟಿಸಿದ್ದು ಅವರು ಸ್ವಯಂಪ್ರೇರಣೆಯಿಂದ ತಾವು ಅಕ್ರಮವಾಗಿ ನಿರ್ಮಿಸಿದ ಕಟ್ಟಡದ ಭಾಗಗಳನ್ನು ತೆರವುಗೊಳಿಸಲಾರಂಭಿಸಿದ್ದಾರೆ. ಗುಪ್ತಾ ಅವರು ಈ ಸ್ಥಳಗಳಿಗೆಲ್ಲಾ ಮಂಗಳವಾರ ನೀಡಿದ ದಿಢೀರ್ ಭೇಟಿಯ ನಂತರ ಈ ಬೆಳವಣಿಗೆ ಕಂಡುಬಂದಿದೆ.

ನಗರದ ಜೀವರ್ಗಿ ಕ್ರಾಸ್, ಮುಖ್ಯ ಬಸ್ ನಿಲ್ದಾಣ, ಅಲಂದ್ ಚೌಕ್, ಶಹಾ ಬಜಾರ್ ಮತ್ತಿತರೆಡೆಗಳಲ್ಲಿ ಆಯುಕ್ತರ ಎಚ್ಚರಿಕೆ ಫಲ ನೀಡಿದೆ. ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ವಾಹನ ಪಾರ್ಕಿಂಗಿಗೆ ಅನುವು ಮಾಡಿಕೊಡದೇ ಇದ್ದಲ್ಲಿ ಮಹಾ ನಗರಪಾಲಿಕೆಗೆ ದಂಡ ತೆರಬೇಕಾದೀತೆಂಬ ಭಯದಿಂದ ಸಾರ್ವಜನಿಕರು ತಾವೇ ಖುದ್ದಾಗಿ ಅವುಗಳನ್ನು ತೆರವುಗೊಳಿಸುತ್ತಿದ್ದಾರೆ.