ಸರಕಾರಿ ಹಾಸ್ಟೆಲುಗಳಿಗೆ ಭೇಟಿ ನೀಡಿ ಅಲ್ಲಿಯೇ ಊಟ ಮಾಡಿ, ಮಲಗುತ್ತಾರೆ ಈ ಅಧಿಕಾರಿ

ಮಣಿವಣ್ಣನ್

ತಮ್ಮ ಭೇಟಿ ಸಂದರ್ಭ ಹಾಸ್ಟೆಲುಗಳಲ್ಲೇಕೆ ವಾಸಿಸುತ್ತಿದ್ದೀರಿ ಎಂಬ ಪ್ರಶ್ನೆಗೆ ಈ 1998ನೇ ಬ್ಯಾಚಿನ ಐಎಎಸ್ ಅಧಿಕಾರಿ ಮಣಿವಣ್ಣನ್ ವಿನಮ್ರರಾಗಿ ಹೀಗೆಂದು ಉತ್ತರಿಸುತ್ತಾರೆ : “ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಅವರು ಇಲಾಖೆ ನಡೆಸುವ ಹಾಸ್ಟೆಲ್ಲುಗಳಿಗೆ ಉತ್ತಮ ಸೌಕರ್ಯ ನೀಡಬೇಕೆಂಬ ಯೋಚನೆಯಲ್ಲಿದ್ದಾರೆ. ಇಲಾಖೆಯ ಕಾರ್ಯದರ್ಶಿಯಾಗಿ ಈ ನಿಟ್ಟಿನಲ್ಲಿ ನಾನು ನನ್ನ ಕಾರ್ಯ ನಿರ್ವಹಿಸುತ್ತಿದ್ದೇನೆ.”

ಬೆಳಗಾವಿ : ಅವರೊಬ್ಬ ಹಿರಿಯ ಸರಕಾರಿ ಅಧಿಕಾರಿ. ಕಳೆದ ಒಂದು ವಾರದಲ್ಲಿ ಅವರು ಸರಕಾರಿ ಹಾಸ್ಟೆಲುಗಳ ಮೆಸ್ಸುಗಳಲ್ಲಿ ಊಟ ಮಾಡುತ್ತಿದ್ದಾರೆ, ಅಲ್ಲಿಯೇ ಮಲಗುತ್ತಿದ್ದಾರೆ ಹಾಗೂ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ವಾಕಿಂಗ್ ಹೋಗುತ್ತಾರೆ. ಇವೆಲ್ಲವೂ ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ ಹಾಸ್ಟೆಲ್ಲುಗಳಲ್ಲಿರುವ ಪರಿಸ್ಥಿತಿಯನ್ನು ಹಾಗೂ ಅಲ್ಲಿನ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿಯುವ ಪ್ರಯತ್ನ.

ಇಂತಹ ಅಪರೂಪದ ಕಾರ್ಯಕ್ಕೆ ಕೈ ಹಾಕಿದವರು ಬೇರ್ಯಾರೂ ಅಲ್ಲ. ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿರುವ ಪಿ ಮಣಿವಣ್ಣನ್.  ಬೆಳಗಾವಿಗೆ ಒಂದು ವಾರದ ಭೇಟಿಯಲ್ಲಿರುವ ಅವರು  ಅಲ್ಲಿನ ಹಲವು ಶಾಲೆಗಳಿಗೆ ಹಾಗೂ ತಮ್ಮ ಇಲಾಖೆ ನಡೆಸುತ್ತಿರುವ ಹಾಸ್ಟೆಲುಗಳನ್ನು ಯಾವುದೇ ಮಾಹಿತಿ ನೀಡದೆ ಸಂದರ್ಶಿಸುತ್ತಾರೆ. ಇಲ್ಲಿಯತನಕ ಅವರು ಹುಬ್ಬಳ್ಳಿಯಲ್ಲಿರುವ ಪೋಸ್ಟ್-ಮೆಟ್ರಿಕ್ ಹುಡುಗರ ಹಾಸ್ಟೆಲ್, ಧಾರವಾಡದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಬೆಳಗಾವಿಯ ಖಾನಾಪುರ ತಾಲೂಕಿನ ನಂದಗಡದಲ್ಲಿರುವ ಸಂಗೊಳ್ಳಿ ರಾಯಣ್ಣ ಸ್ಮಾರಕ ವಸತಿ ಶಾಲೆಯಲ್ಲಿ ತಂಗಿದ್ದಾರೆ.

ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆಯುವಾಗಲೆಲ್ಲಾ ಅಲ್ಲಿನ ಐಷಾರಾಮಿ ಹೊಟೇಲುಗಳಲ್ಲಿ ತಂಗುವ ಶಾಸಕರುಗಳಿಗೆ  ಮಣಿವಣ್ಣನ್ ಅವರು ಯಾವುದೇ ಪ್ರಚಾರ ಬಯಸದೆ ನಡೆಸುವ ಈ ಕೈಂಕರ್ಯ  ಕಣ್ಣು ತೆರೆಸುವಂತಹದದ್ದು.

ತಮ್ಮ ಭೇಟಿ ಸಂದರ್ಭ ಹಾಸ್ಟೆಲುಗಳಲ್ಲೇಕೆ ವಾಸಿಸುತ್ತಿದ್ದೀರಿ ಎಂಬ ಪ್ರಶ್ನೆಗೆ ಈ 1998ನೇ ಬ್ಯಾಚಿನ ಐಎಎಸ್ ಅಧಿಕಾರಿ ವಿನಮ್ರರಾಗಿ ಹೀಗೆಂದು ಉತ್ತರಿಸುತ್ತಾರೆ : “ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಅವರು ಇಲಾಖೆ ನಡೆಸುವ ಹಾಸ್ಟೆಲ್ಲುಗಳಿಗೆ ಉತ್ತಮ ಸೌಕರ್ಯ ನೀಡಬೇಕೆಂಬ ಯೋಚನೆಯಲ್ಲಿದ್ದಾರೆ. ಇಲಾಖೆಯ ಕಾರ್ಯದರ್ಶಿಯಾಗಿ ಈ ನಿಟ್ಟಿನಲ್ಲಿ ನಾನು ನನ್ನ ಕಾರ್ಯ ನಿರ್ವಹಿಸುತ್ತಿದ್ದೇನೆ.”

ವಿದ್ಯಾರ್ಥಿಗಳೊಂದಿಗೆ ತಾವು ನಡೆಸಿದ ಸಂವಹನದ ಬಗ್ಗೆ ಮಾತನಾಡಿದ ಅವರು “ಕೆಲವರಿಗೆ ತಮ್ಮ ಹಾಸ್ಟೆಲ್ ಸುತ್ತ ಕಂಪೌಂಡ್ ಗೋಡೆ ಬೇಕಿದ್ದರೆ, ಇನ್ನು ಕೆಲವರು ಉತ್ತಮ ಆಹಾರ, ಬಿಸಿ ನೀರು ಹಾಗೂ ಆಟದ ಮೈದಾನ ಆಗತ್ಯವಿದೆಯೆಂದರು. ಇನ್ನೂ ಕೆಲವರು  ತಮ್ಮ ಶಾಲೆಗಳಿಗೆ ಡಿಸೀಲ್ ಜನರೇಟರ್ ಹಾಗೂ ಕಂಪ್ಯುಟರ್ ಲ್ಯಾಬ್ ಬೇಕೆಂದರು” ಎಂದು ಮಣಿವಣ್ಣನ್ ವಿವರಿಸಿದರು.

ಕಲಘಟಗಿಯಲ್ಲಿನ ಹಾಸ್ಟೆಲ್ ಒಂದರಲ್ಲಿ ರಾತ್ರಿ ಕಳೆದ ತಮ್ಮ ಅನುಭವವನ್ನು ವಿವರಿಸಿದ ಮಣಿವಣ್ಣನ್, “ಅಲ್ಲಿ ತೀವ್ರ ಚಳಿಯಿಂದ ಮಲಗುವುದು ಅಸಾಧ್ಯವಾಗಿತ್ತು, ಕಿಟಿಕಿಯ ಗಾಜುಗಳು ಒಡೆದು ಹೋಗಿದ್ದವು. ಅಲ್ಲಿ ನೀಡಲಾದ ಕಂಬಳಿ ಕೂಡ ಸಾಕಾಗುತ್ತಿರಲಿಲ್ಲ.  ಕಿಟಿಕಿ ಗಾಜುಗಳನ್ನು ದುರಸ್ತಿಗೊಳಿಸುವಂತೆ ಹಾಗೂ ಅಗತ್ಯವಿದ್ದರೆ ಮಕ್ಕಳಿಗೆ ಹೆಚ್ಚುವರಿ ಕಂಬಳಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ” ಎಂದು ಅವರು ತಿಳಿಸಿದರು

ಹಾಸ್ಟೆಲ್ಲುಗಳ ಅಡುಗೆ ಮನೆ, ಸ್ಟೋರ್ ರೂಂ ಕೂಡ ಸಂದರ್ಶಿಸಿದ ಮಣಿವಣ್ಣನ್ ಅಲ್ಲಿನ ವಿದ್ಯಾರ್ಥಿನಿಯರಲ್ಲೂ ಮಾತನಾಡಿ ಅವರ ಸುರಕ್ಷಿತತೆಯ ಬಗ್ಗೆ ಖಚಿತಪಡಿಸಿಕೊಂಡರು. ಕೆಲವು ಮಕ್ಕಳಿಗೆ ಕಷ್ಟವಾದ ಪಾಠಗಳನ್ನೂ ಮಣಿವಣ್ಣನ್ ಕಲಿಸಿಕೊಟ್ಟರು. ಮಕ್ಕಳೊಂದಿಗೆ ಬೆಳಗ್ಗಿನ  ವ್ಯಾಯಾಮದಲ್ಲಿ ಪಾಲ್ಗೊಂಡರಲ್ಲದೆ ಅವರೊಂದಿಗೆ ವಾಕಿಂಗ್ ಕೂಡ ಹೋದರು ಈ ಅಧಿಕಾರಿ.

ಇಲಾಖೆಯ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಸಮಾಜ ಕಲ್ಯಾಣ ಇಲಾಖೆ ನಡೆಸುವ ಹಾಸ್ಟೆಲ್ಲುಗಳಿಗೆ ಭೇಟಿ ನೀಡಿ ಅಲ್ಲಿ ಒಂದು ರಾತ್ರಿ ಕಳೆದು ಮಕ್ಕಳ ಸಮಸ್ಯೆಯ ಬಗ್ಗೆ ತಿಳಿದು ಕೊಳ್ಳಬೇಕೆಂದು ಅವರು ಅದೇಶಿಸಿದ್ದಾರೆ. ತಾವು ಇನ್ನೂ ಹಲವು ಹಾಸ್ಟೆಲ್ಲುಗಳಿಗೆ ಹೀಗೆಯೇ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅರಿತು ಇಲಾಖೆ ನಡೆಸುವ ಹಾಸ್ಟೆಲ್ಲುಗಳ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ  ಹೆಜ್ಜೆಯಿಡುವುದಾಗಿ ಈ ನಿಷ್ಠಾವಂತ ಅಧಿಕಾರಿ ಹೇಳುತ್ತಾರೆ.