ಪೋಸ್ಕೋ ಜಮೀನು ಆಕ್ರಮಿಸಿದ ಒಡಿಷಾ ಆದಿವಾಸಿಗಳ ಬಂಧನ

ಮೇ 2017ರಿಂದಲೂ ಒಡಿಷಾ ಸರ್ಕಾರದ ಪ್ರೇರಣೆಯಿಂದ ತಮ್ಮ ಭೂಮಿಯಲ್ಲಿ ತನ್ನ ಘಟಕ ಸ್ಥಾಪಿಸಲು ಯತ್ನಿಸುತ್ತರುವ ಪೋಸ್ಕೋ ಕಂಪನಿ ಅತಿಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನಲ್ಲಿ 2500ಕ್ಕೂ ಹೆಚ್ಚು ಆದಿವಾಸಿಗಳು ಪುನಃ ಬಂದು ನೆಲೆಸಿದ್ದು, ಇವರ ಪೈಕಿ ನಾನ್ನೂರು ಜನರನ್ನು ಈಗಾಗಲೇ ಬಂಧಿಸಲಾಗಿದೆ. ಉಳಿದ ಎರಡು ಸಾವಿರ ಜನರನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆಗಳಿವೆ. ಐನೂರಕ್ಕು ಹೆಚ್ಚುಮಹಿಳೆಯರಿಗೆ ಬಂಧನದ ವಾರಂಟ್ ಕಳುಹಿಸಲಾಗಿದೆ.

ಒಡಿಷಾದ ಪ್ಯಾರಾದೀಪ್ ಪ್ರಾಂತ್ಯದ ಆದಿವಾಸಿಗಳು ಜೂನ್ 2005ರಿಂದಲೂ ಪೋಸ್ಕೋ ಪ್ರತಿರೋಧ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ತಮ್ಮ ಭೂಮಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಪೋಸ್ಕೋ ವಿರುದ್ಧ ದೀರ್ಘ ಹೋರಾಟದ ನಂತರ ಗೆಲುವು ಸಆಧಿಸಿದ ಪ್ರತಿರೋಧ ಸಮಿತಿ ಈಗ ಒಡಿಷಾ ಸರ್ಕಾರ 27 ಸಾವಿರ ಎಕರೆ ಜಮೀನನ್ನು ಜೆಎಸ್ಡಬ್ಲ್ಯು ಕಂಪನಿಗೆ ನೀಡುತ್ತಿರುವುದನ್ನು ತೀವ್ರವಾಗಿ ವಿರೋಧಿಸುತ್ತಿದೆ. 4500 ಎಕರೆ ಭೂಮಿಯನ್ನು ಆಕ್ರಮಿಸಿರುವ ಜೆಎಡ್‍ಡಬ್ಲ್ಯು ಕಂಪನಿ 900 ಮೆಗಾವ್ಯಾಟ್ ವಿದ್ಯುತ್ ಮತ್ತು 10 ಮಿಲಿಯನ್ ಟನ್ ಉಕ್ಕು  ಉತ್ಪಾದಿಸುವ ಘಟಕದಲ್ಲಿ 50 ಸಾವಿರ ಕೋಟಿ ರೂ ಬಂಡವಾಳ ಹೂಡಲು ಸಜ್ಜಾಗಿದೆ.

ಈ ಘಟಕ ಸ್ಥಾಪನೆಯ ವಿರುದ್ಧ ಹೋರಾಟ ನಡೆಸಿರುವ ಪೋಸ್ಕೋ ಪ್ರತಿರೋಧ ಸಮಿತಿಯ ಕಾರ್ಯಕರ್ತರ ವಿರುದ್ಧ ಈವರೆಗೂ 350 ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲಾಗಿದೆ. 2011ರಲ್ಲಿ ಒಡಿಷಾ ಸರ್ಕಾರ ನುವಾಗಾಂವ್ ಮತ್ತು ಗಡಕಚುಂಗಾ ಪ್ರಾಂತ್ಯದಲ್ಲಿ ಒತ್ತಡ ಹೇರುವ ಮೂಲಕ 2000 ಎಕರೆ ಭೂಮಿಯನ್ನು ವಶಪಡಿಸಿಕೊಂಡಿದೆ. 2013ರಲ್ಲಿ ಧಕಿಯಾ ಪಂಚಾಯತಿಗೆ ಸೇರಿದ 700 ಎಕರೆ ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ರೀತಿ ಪೋಸ್ಕೋ ಮತ್ತು ಸರ್ಕಾರ ಅತಿಕ್ರಮಿಸಿ ವಶಪಡಿಸಿಕೊಂಡ ಜಮೀನನ್ನು ಮರಳಿ ಪಡೆಯಲು ಪ್ರತಿರೊಧ ಸಮಿತಿ ನಿರ್ಧರಿಸಿದ್ದು ಗಡಕಚುಂಗಾ ಗ್ರಾಮಸ್ಥರು ತಮ್ಮಿಂದ ಕಸಿದುಕೊಳ್ಳಲಾಗಿದ್ದ ಭೂಮಿಯನ್ನು ಪುನಃ ಆಕ್ರಮಿಸಿಕೊಂಡಿದ್ದಾರೆ. 2015ರಲ್ಲಿ ಗೋವಿಂದ ಪುರ ಗ್ರಾಮಸ್ಥರು ಇದೇ ರೀತಿ ಭೂಮಿಯನ್ನು ಆಕ್ರಮಿಸಿದ್ದು 40 ಜನರ ವಿರುದ್ಧ ಸಿವಿಲ್ ದಾವೆ ಹೂಡಲಾಗಿದೆ. ನುವಾಗಾಂವ್ ಗ್ರಾಮಸ್ಥರು 2015ರಲ್ಲಿ ತಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ. ಗ್ರಾಮಸ್ಥರು ತಮ್ಮ ಜಮೀನಿನ ಸುತ್ತಲೂ ಬೇಲಿಯನ್ನೂ ಕಟ್ಟಿದ್ದಾರೆ. ಒಟ್ಟು 350ಕ್ಕೂ ಹೆಚ್ಚು ಜನರ ವಿರುದ್ಧ ಸಿವಿಲ್ ದಾವೆ ಹೂಡಲಾಗಿದ್ದು, 40 ಜನರ ವಿರುದ್ಧ ಕ್ರಿಮಿನಲ್ ದಾವೆ ಹೂಡಲಾಗಿದೆ. 2500ಕ್ಕೂ ಹೆಚ್ಚು ಆದಿವಾಸಿಗಳಿಗೆ ವಾರಂಟ್ ಜಾರಿ ಮಾಡಲಾಗಿದೆ.