ಓಖಿ ಎಫೆಕ್ಟ್ : ಮೀನಿನ ದರ ಗಗನಕ್ಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಒಂದೆಡೆ ಒಖಿ ಚಂಡಮಾರುತಕ್ಕೆ ಸಿಲುಕಿ ಕಡಲು ಪ್ರಕ್ಷುಬ್ಧಗೊಂಡಿದ್ದರೆ, ಇತ್ತ ಕಳೆದೊಂದು ವಾರದಿಂದ ಮೀನುಗಾರರು ಮೀನುಗಾರಿಕೆ ನಡೆಸದೇ ಸಂಕಷ್ಟದಲ್ಲಿದ್ದಾರೆ. ಈ ನಡುವೆ ಸಹಜವಾಗಿಯೇ ಮೀನಿನ ಅಲಭ್ಯತೆಯಿಂದ ಮೀನಿನ ದರ ಗಗನಕ್ಕೇರಿದೆ. ಮೀನುಗಾರಿಕೆಗೆ ಬೋಟುಗಳು ತೆರಳದ ಕಾರಣ ಇರುವ ಮೀನನ್ನಷ್ಟೇ ದುಬಾರಿ ಬೆಲೆಗೆ ಮೀನುಗಾರರು ಮಾರಾಟ ಮಾಡುತ್ತಿದ್ದಾರೆ.

ಬುಧವಾರದಂದು ಮಾರುಕಟ್ಟೆಯಲ್ಲಿ ಸೀಸರ್ ಮತ್ತು ಮಾಂಜಿ(ಪಾಂಪ್ರೆಟ್) ಮೀನು ಬಂದಿಲ್ಲ. ಆದರೆ ಮೀನು ಪ್ರಿಯರು ಮಾತ್ರ ಮತ್ತೆ ಗುರುವಾರದಿಂದ ಬೋಟುಗಳು ಕಡಲಿಗೆ ಇಳಿದು ಮತ್ತೆ ಒಳ್ಳೆಯ ಮೀನುಗಳು ಲಭ್ಯವಾಗಲಿವೆ ಎನ್ನುವ ಆಶಾವಾದ ಇರಿಸಿಕೊಂಡಿದ್ದಾರೆ.  ಕಿಲೋ ಗ್ರಾಂಗೆ ರೂ 500ರಿಂದ ರೂ  550ರವರೆಗೆ ಮಾರಾಟವಾಗುತ್ತಿದ್ದ ಸೀರ್ ಮೀನು ಏಕಾಏಕಿ 770 ರೂ ಆಗಿದೆ. ವಾರದ ಹಿಂದೆ ಕೆಜಿಗೆ 180 ರೂಪಾಯಿಗೆ ಮಾರಾಟವಾಗುತ್ತಿದ್ದ ಬಂಗುಡೆ ಮೀನು ಬುಧವಾರದಂದು 220 ರೂಪಾಯಿಗೆ ಮಾರಾಟವಾಗಿದೆ.

ಬುಧವಾರವೂ ಮಂಗಳೂರು ಧಕ್ಕೆಗೆ ಮೀನುಗಳನ್ನು ಹೊತ್ತ ಬೋಟುಗಳು ಬಂದಿಲ್ಲ ಎಂದಿರುವ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧಿಕಾರಿಗಳು “ವಾರದ ಹಿಂದೆ ಬಂದಿರುವ ಮೀನುಗಳನ್ನೇ ಇದೀಗ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ.  ಶೀಘ್ರವೇ ತಾಜಾ ಮೀನುಗಳು ಲಭ್ಯವಾಗುವ ವಿಶ್ವಾಸವಿದೆ. ಪಾಂಪ್ರೆಟ್ ಮತ್ತು ಸೀರ್ ಮೀನುಗಳು ಸಿಗುತ್ತಿವೆಯಾದರೂ ಮಾರುಕಟ್ಟೆಗೆ ಬಂದ ಕೂಡಲೇ ಬಿಕರಿಯಾಗುತ್ತಿವೆ” ಎಂದವರು ವಿವರಿಸಿದ್ದಾರೆ.