ಬಂಟ್ವಾಳದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ವಿಘ್ನ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಬಿ ಸಿ ರೋಡಿನಲ್ಲಿ ನೂತನ ಖಾಸಗಿ ಬಸ್ ನಿಲ್ದಾಣ ನಿರ್ಮಿಸುವ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರ ಮಹತ್ವಪೂರ್ಣ ಯೋಜನೆಗೆ ಇಲ್ಲಿನ ತಾ ಪಂ ಕಾರ್ಯನಿರ್ವಹಣಾಧಿಕಾರಿ ಹಳೆ ತಾಲೂಕು ಪಂಚಾಯತ್ ಕಟ್ಟಡದ ಸಮೀಪದಲ್ಲಿರುವ ಸುದೃಢ ವಾಣಿಜ್ಯ ಸಂಕೀರ್ಣ ಕೆಡಹುವ ನಿರ್ಣಯ ಕೈಗೊಂಡಿರುವುದು ಇದೀಗ

ಯೋಜನೆಗೆ ವಿಘ್ನವಾಗಿ ಪರಿಣಮಿಸಿದೆ.ಬಿ ಸಿ ರೋಡು ಹಳೆ ತಾ ಪಂ ಕಟ್ಟಡ ಸಮೀಪದಲ್ಲಿರುವ ಸುದೃಢ ವಾಣಿಜ್ಯ ಸಂಕೀರ್ಣ ಕೆಡಹುವ ತಾ ಪಂ ನಿರ್ಣಯಕ್ಕೆ ಕಟ್ಟಡದಲ್ಲಿರುವ ಅಂಗಡಿ ಮಾಲಕರು ಜಿಲ್ಲಾ ಪಂಚಾಯತ್ ಅಧ್ಯಕ್ಷರ ನ್ಯಾಯಾಲಯದಲ್ಲಿ ಫಿರ್ಯಾದಿ ದಾಖಲಿಸಿ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕಟ್ಟಡದಲ್ಲಿ ವ್ಯಾಪಾರ ನಡೆಸುವ ವಿವಿಧ ಅಂಗಡಿ ಮಾಲಕರ ಪರವಾಗಿ ವಕೀಲರೊಬ್ಬರು ಜಿ ಪಂ ಅಧ್ಯಕ್ಷರ ನ್ಯಾಯಾಲಯದಲ್ಲಿ ಅಫೀಲು ದಾವೆ ಹೂಡಿದ್ದರು. ಬಂಟ್ವಾಳ ತಾಲೂಕು ಪಂಚಾಯತ್ 2017 ಎಪ್ರಿಲ್ 17ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಸಂಖ್ಯೆ 9(6)ರಂತೆ ತಾ ಪಂ ಹಳೆಯ ಕಟ್ಟಡ ಜೊತೆಗೆ ಪಕ್ಕದ ವಾಣಿಜ್ಯ ಸಂಕೀರ್ಣವನ್ನು ಕೂಡ ಕೆಡಹಲು ತೀರ್ಮಾನಿಸಿತ್ತು. ಈ ನಿರ್ಣಯದ ವಿರುದ್ಧ ಅಂಗಡಿ ಮಾಲಕರು ಜಿ ಪಂ ಅಧ್ಯಕ್ಷರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಸಾರ್ವಜನಿಕರ ಹಣದಲ್ಲಿ ನಿರ್ಮಿಸಲಾದ ಕಟ್ಟಡವನ್ನು ಕೆಡವುದು ಕಾನೂನು ಬಾಹಿರವಾಗಿದೆ ಎಂದು ತಮ್ಮ ದಾವೆಯಲ್ಲಿ ಮನವರಿಕೆ ಮಾಡಿದ್ದರು.

ದಾವೆಯಲ್ಲಿ ತಾ ಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷರನ್ನು ಪ್ರತಿವಾದಿಯನ್ನಾಗಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಜಿ ಪಂ ಅಧ್ಯಕ್ಷರ ನ್ಯಾಯಾಲಯ ತಾ ಪಂ ನಿರ್ಣಯ ಸಂಖ್ಯೆ 9(6)ನ್ನು ಜಾರಿಗೆ ತರದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಿದೆ. ಅಲ್ಲದೆ ಅಫೀಲುದಾರರಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕಕ್ಕೂ ತೊಂದರೆ ನೀಡಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಬಿ ಸಿ ರೋಡಿನ ಹಳೆಯ ತಾ ಪಂ ಕಟ್ಟಡ, ಪಕ್ಕದ ವಾಣಿಜ್ಯ ಸಂಕೀರ್ಣ ಮತ್ತು ಉಪನೋಂದಣಿ ಕಚೇರಿಯನ್ನು ತೆರವುಗೊಳಿಸಿ ಸುಸಜ್ಜಿತವಾದ ಪಿಪಿಪಿ ಮಾದರಿಯಲ್ಲಿ ಖಾಸಗಿ ಬಸ್ ತಂಗುದಾಣ ನಿರ್ಮಿಸಲು ಸಚಿವ ರಮಾನಾಥ ರೈ ನಿರ್ದೇಶನದಂತೆ ತಾ ಪಂ ಇಒ ಅವರು ಯೋಜನೆಯನ್ನು ರೂಪಿಸಿದ್ದರು. ಮುಂದಿನ ವಾರ ಮುಖ್ಯಮಂತ್ರಿ ಬಂಟ್ವಾಳಕ್ಕೆ ಆಗಮಿಸುವ ವೇಳೆ ಬಸ್ ನಿಲ್ದಾಣಕ್ಕೆ ಶಿಲಾನ್ಯಾಸ ನೆರವೇರಿಸಲು ತಯಾರಿ ಕೂಡಾ ನಡೆದಿದೆ.  ಈ ಮಧ್ಯೆ ಇಲ್ಲಿನ ಸುದೃಢ ಕಟ್ಟಡವನ್ನು ಇಒ ಅವರು ಸೇರಿಸಿಕೊಂಡಿರುವುದು ಇದೀಗ ಬಸ್ ನಿಲ್ದಾಣ ಕಾಮಗಾರಿ ನೆನೆಗುದಿಗೆ ಬೀಳಲು ಕಾರಣವಾಗಿದೆ ಎನ್ನಲಾಗುತ್ತಿದೆ.