ಫೋಟೋಗ್ರಾಫರ್ ಕಣ್ಣಿಗೆ ಅಶ್ಲೀಲವಾಗಿ ಕಂಡ ಶಾಲಾ ಸಮವಸ್ತ್ರ ಸಾಮಾಜಿಕ ತಾಣದಲ್ಲಿ ವೈರಲ್

ಪುರುಷಪ್ರಧಾನ ಸಮಾಜದ ದೃಷ್ಟಿಕೋನದಿಂದ ನೋಡುವಾಗ ಸಮವಸ್ತ್ರ ಅಶ್ಲೀಲವಾಗಿ ಕಾಣಿಸುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಕೊಟ್ಟಾಯಂ : ಕೇರಳದ ಕೊಟ್ಟಾಯಂನ ಅರುವಿತುರದ ಶಾಲೆಯೊಂದರ ಸಮವಸ್ತ್ರದ ಬಗ್ಗೆ ಅಂತರ್ಜಾಲದಲ್ಲಿ ದೊಡ್ಡ ವಿವಾದ ಸೃಷ್ಟಿಯಾಗಿದೆ. ಸಮವಸ್ತ್ರವನ್ನು `ಅಶ್ಲೀಲ’ ಎಂದು ಫೇಸ್ಬುಕ್ ಪೋಸ್ಟ್ ಬರೆದ ಕಾರಣದಿಂದ ಅಂತರ್ಜಾಲದಲ್ಲಿ ಶಾಲೆಯ ವಿರುದ್ಧ ದೂರುಗಳು ಬಂದಿವೆ. ಆದರೆ ಶಾಲೆಯ ಅದ್ಯಾಪಕರು ಸಮವಸ್ತ್ರವನ್ನು ಉತ್ತಮವಾಗಿ ವಿನ್ಯಾಸ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಫೋಟೋಗ್ರಾಫರ್ ಝಕಾರಿಯಕ್ ಪೊಂಕುನ್ನಮ್ ತಮ್ಮ ಫೇಸ್ಬುಕ್ ಪುಟದಲ್ಲಿ ಸೇಂಟ್ ಆಲ್ಫೋನ್ಸಾ ಪಬ್ಲಿಕ್ ಸ್ಕೂಲಿನ ಸಮವಸ್ತ್ರ ಧರಿಸಿದ ಮೂವರು ಬಾಲಕಿಯರ ಫೋಟೋ ಹಾಕಿ, ಸಮವಸ್ತ್ರ ಅಶ್ಲೀಲವಾಗಿದೆ ಎಂದು ಬರೆದಿದ್ದರು. ಆ ಪೋಸ್ಟನ್ನು ತಕ್ಷಣವೇ ಹಲವರು ಶೇರ್ ಮಾಡಿ ಶಾಲಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಕುತೂಹಲವೆಂದರೆ ಝಕಾರಿಯಕರ ಪೋಸ್ಟಿಗೆ ಕಮೆಂಟ್ ಮಾಡಿದವರಲ್ಲಿ ಬಹುತೇಕರು ಪುರುಷರೇ. ಬಹಳಷ್ಟು ಮಂದಿ ಅಶ್ಲೀಲ ಕಮೆಂಟುಗಳನ್ನೇ ಮಾಡಿದ್ದಾರೆ ಮತ್ತು ಅಶ್ಲೀಲ ಚಿತ್ರಗಳನ್ನೂ ಕಮೆಂಟ್ ಜೊತೆ ಪೋಸ್ಟ್ ಮಾಡಿದ್ದಾರೆ. ಐದು ಸಾವಿರಕ್ಕೂ ಅಧಿಕ ಮಂದಿ ಒಂದೇ ದಿನದಲ್ಲಿ ಈ ಪೋಸ್ಟ್ ಶೇರ್ ಮಾಡಿರುವುದಲ್ಲದೆ, ಸಾಮಾಜಿಕ ತಾಣಗಳಲ್ಲೂ ಇದು ಹರಡಿದೆ. ಈ ನಡುವೆ ಕೋಯಿಕ್ಕೋಡಿನ ನೌಷದ್ ತೆಕ್ಕಯಿಲ್ ಎನ್ನುವ ವ್ಯಕ್ತಿ ಶಾಲೆ ವಿರುದ್ಧ ಮಕ್ಕಳ ಹಕ್ಕು ಆಯೋಗಕ್ಕೆ ದೂರು ನೀಡಿ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.

ಆದರೆ ಬಹಳಷ್ಟು ಮಂದಿ ಈ ಸಮವಸ್ತ್ರ ಅಶ್ಲೀಲವಾಗಿಲ್ಲ ಎಂದೂ ಕಮೆಂಟ್ ಮಾಡಿದ್ದಾರೆ. ಪುರುಷಪ್ರಧಾನ ಸಮಾಜದ ದೃಷ್ಟಿಕೋನದಿಂದ ನೋಡುವಾಗ ಸಮವಸ್ತ್ರ ಅಶ್ಲೀಲವಾಗಿ ಕಾಣಿಸುತ್ತದೆ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಶಾಲೆಯ ಪ್ರಾಂಶುಪಾಲ ಸರ್ ರೋಸಿಲಿ ಪ್ರಕಾರ ಫೋಟೋದಲ್ಲಿರುವ ಸಮವಸ್ತ್ರ ತಮ್ಮ ಶಾಲೆಯ ಸಮವಸ್ತ್ರಕ್ಕೆ ಹೋಲುವುದೇ ಇಲ್ಲ. “ಫೋಟೋಶಾಪ್ ಮಾಡಲಾದ ಚಿತ್ರವನ್ನು ಪ್ರಚಾರ ಮಾಡಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.