ಉಡುಪಿ ನಗರಸಭೆ ತ್ಯಾಜ್ಯ ನೀರು 2 ಗ್ರಾ ಪಂ ಚರಂಡಿಗೆ : ಆಕ್ಷೇಪ

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದ ಕಡೆಕಾರು ಮತ್ತು ಅಂಬಲಪಾಡಿ ಗ್ರಾಮ ಪಂಚಾಯತುಗಳು ಮಳೆ ನೀರು ಹರಿಯಲೆಂದು ನಿರ್ಮಿಸಿರುವ ಚರಂಡಿಗೆ ಉಡುಪಿ ನಗರಸಭೆಯು ತ್ಯಾಜ್ಯ ನೀರನ್ನು ಹರಿಯಬಿಡುತ್ತಿದ್ದು, ಎರಡೂ ಗ್ರಾಮ ಪಂಚಾಯತುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಈ ಕುರಿತು ವಿಜ್ಞಾಪನಾ ಪತ್ರವೊಂದನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದೆ.

ಜಿಲ್ಲಾಧಿಕಾರಿ ಟಿ ವೆಂಕಟೇಶಗೆ ಎರಡೂ ಗ್ರಾಮ ಪಂಚಾಯತುಗಳು ಸಲ್ಲಿಸಿದ ವಿಜ್ಞಾಪನಾ ಪತ್ರದಲ್ಲಿ “ನಗರಸಭೆ ತ್ಯಾಜ್ಯವನ್ನು ಗ್ರಾಮಪಂಚಾಯತುಗಳ ಚರಂಡಿಗೆ ಹರಿಯಬಿಡುವುದನ್ನು ಜಿಲ್ಲಾಡಳಿತವು ತಡೆಹಿಡಿಯಬೇಕು, ತ್ಯಾಜ್ಯ ನೀರನ್ನು ಬೇರೆಡೆಗೆ ತಿರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ಜಿಲ್ಲಾಡಳಿತವು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಣೆಕಟ್ಟನ್ನು ನಿರ್ಮಿಸಿ ಹೆಚ್ಚುವರಿ ಮಳೆನೀರು ಹರಿಯಲು ಅನುಕೂಲಗೊಳಿಸಬೇಕು. ನಗರಸಭೆಯ ತಪ್ಪಿನಿಂದಾಗಿ ಈ ಪ್ರದೇಶದ ಜನರು ಕೊಳಚೆ ನೀರಿನ ವಾಸನೆಯ ತೊಂದರೆ ಎದುರಿಸುವಂತಾಗಿದೆ, ಮಾತ್ರವಲ್ಲ ಜನರು ರೋಗದ ಭೀತಿ ಎದುರಿಸುತ್ತಿದ್ದಾರೆ” ಎಂದು ಪತ್ರ ವಿವರಿಸಿದೆ.

ಮಳೆ ನೀರು ಹರಿಯುವ ಚರಂಡಿ ಪೂರ್ತಿ ಕೊಳಚೆ ನೀರಿನಿಂದ ತುಂಬಿಹೋಗಿದೆ. ಚರಂಡಿಯ ಪಕ್ಕದಲ್ಲಿರುವ ಬಾವಿಗಳಿಗೂ ಪರಿಣಾಮವಾಗಿದೆ. ಈ ಪ್ರದೇಶದ ಕೃಷಿಯ ಮೇಲೂ ದುಷ್ಪರಿಣಾಮ ಬೀರಿದೆ. ಈ ವಿಷಯದಲ್ಲಿ ನಗರಪಾಲಿಕೆ ಗಮನ ಹರಿಸುತ್ತಿದೆ ಎಂಬುದನ್ನು ತೋರ್ಪಡಿಸಲು ಕ್ರಿಮಿನಾಶಕಗಳನ್ನು ಸಿಂಪಡಿಸುವ ನಾಟಕ ಮಾಡುತ್ತಿದೆ. ಆದರೆ ಇದರಿಂದ ಯಾವುದೇ ಬದಲಾವಣೆಗಳಾಗಿಲ್ಲ. ಈಗಾಗಲೇ ಎರಡೂ ಗ್ರಾಮ ಪಂಚಾಯತುಗಳು ನಗರಪಾಲಿಕೆಗೆ ವಿಜ್ಞಾಪನೆಯನ್ನು ಸಲ್ಲಿಸಿ ತ್ಯಾಜ್ಯ ನೀರು ಹರಿಯಬಿಡದಂತೆ ಮನವಿ ಮಾಡಿಕೊಂಡಿದೆ. ಆದರೆ ಇದುವರೆಗೆ ಯಾವುದೇ ಫಲಿತಾಂಶ ಸಿಗದೇ ಇರುವುದರಿಂದ ನಗರಸಭೆ ಅದರ ಸ್ವಂತ ಖರ್ಚಿನಲ್ಲಿ ಮಳೆನೀರಿನ ಚರಂಡಿಯಿಂದ ತ್ಯಾಜ್ಯನೀರನ್ನು ಸ್ವಚ್ಛಗೊಳಿಸಬೇಕು, ಏಕೆಂದರೆ ಪಂಚಾಯತುಗಳ ಬಜೆಟ್ ಮೊತ್ತ ಬಹಳ ಕಡಿಮೆಯಿದ್ದು, ಅದನ್ನು ತ್ಯಾಜ್ಯ ನೀರು ಸ್ವಚ್ಛತೆಗೆ ವಿನಿಯೋಗಿಸಲು ಅಸಾಧ್ಯ ಎಂದು ವಿಜ್ಞಾಪನಾ ಪತ್ರ ತಿಳಿಸಿದೆ.