ಅಸಂಬದ್ಧ ನಂಬರ್ ಪ್ಲೇಟ್ : 136 ಪ್ರಕರಣ ದಾಖಲು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮೋಟಾರು ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ ನಂಬರ್ ಪ್ಲೇಟುಗಳನ್ನು ಅಳವಡಿಸಿರುವ ವಾಹನ ಚಾಲಕರ ವಿರುದ್ಧ ಕ್ರಮ ಕೈಗೊಂಡಿರುವ ಮಂಗಳೂರು ಸಂಚಾರಿ ಪೊಲೀಸರು ಸುಮಾರು 136 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಹಂಪನಕಟ್ಟೆ, ಎಂ ಜಿ ರಸ್ತೆ, ಸುರತ್ಕಲ್, ಕಾವೂರು, ಕೂಳೂರು, ನಂತೂರು ಮತ್ತು ಪಂಪ್ವೆಲ್ಲಿನಲ್ಲಿ ಶುಕ್ರವಾರದಂದು ಸಂಚಾರಿ ಪೊಲೀಸರು ಕ್ರಮಕೈಗೊಂಡರು.

ಇಲಾಖೆಯಿಂದ ಕೆಲ ಸೂಚಿತ ನಿಯಮದಂತೆ ನಂಬರ್ ಪ್ಲೇಟುಗಳನ್ನು ಅಳವಡಿಸಿಕೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ವಾಹನ ಸವಾರರು ತಮಗಿಷ್ಟ ಬಂದಂತೆ ನಂಬರುಗಳನ್ನು, ಅದರಲ್ಲಿ ಬರಹಗಳನ್ನು ಹಾಕುತ್ತಿದ್ದಾರೆ. ಮೋಟಾರ್ ಕಾಯ್ದೆಯನ್ನು ಉಲ್ಲಂಘಿಸಿ ನಂಬರ್ ಪ್ಲೇಟ್ ಅಳವಡಿಸಿದವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಎಸಿಪಿ (ಸಂಚಾರ) ಕೆ ತಿಲಕಚಂದ್ರ ಹೇಳಿದ್ದಾರೆ.

ಒಟ್ಟು ದಾಖಲಾದ ಪ್ರಕರಣಗಳಲ್ಲಿ 13,600 ರೂ ದಂಡ ವಸೂಲಿ ಮಾಡಲಾಗಿದೆ. ಇದಲ್ಲದೆ ಸೈಡ್ ಮಿರರ್ ಇಲ್ಲದಿರುವ ದ್ವಿಚಕ್ರವಾಹನ ಸವಾರರಿಗೆ ಎಚ್ಚರಿಕೆ ನೀಡಲಾಗಿದೆ. ಮೀನುಸಾಗಾಟ ಮಾಡುವ ಸಂದರ್ಭ ತ್ಯಾಜ್ಯ ನೀರನ್ನು ರಸ್ತೆಯಲ್ಲಿ ಹರಿಸಿಕೊಂಡು ಹೋಗುವ ಕಾರಣಕ್ಕೆ 159 ಮಂದಿ ದ್ವಿಚಕ್ರ ಮೀನು ಸಾಗಾಟಗಾರರಿಗೆ ಎಚ್ಚರಿಕೆ ನೊಟೀಸ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.