ಅನಿವಾಸಿ ಕಲ್ಯಾಣ ಸೌಲಭ್ಯಗಳ ಪರಿಷ್ಕರಣೆಗೆ ಸಮಿತಿ ಶಿಫಾರಸು

ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಸಭೆ ಸೇರಿರುವುದು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕೇರಳ ಅನಿವಾಸಿ ಕಲ್ಯಾಣ ಮಂಡಳಿಯನ್ನು ಕೂಡಲೇ ಮರುರಚಿಸುವಂತೆಯೂ, ಕಲ್ಯಾಣ ಪಿಂಚಣಿ ಸೌಲಭ್ಯಗಳನ್ನು ಪರಿಷ್ಕರಿಸಬೇಕೆಂದು ಸರಕಾರದೊಂದಿಗೆ ಶಿಫಾರಸು ಮಾಡುವುದಾಗಿ ಕೇರಳ ವಿಧಾನಸಭಾ ಅನಿವಾಸಿ ಕಲ್ಯಾಣ ಸಮಿತಿಯ ಅಧ್ಯಕ್ಷ ಕೆ ವಿ ಅಬ್ದುಲ್ ಖಾದರ್ ಹೇಳಿದರು.

ಅವರು ಕಾಸರಗೋಡು ಕಲೆಕ್ಟರೇಟ್ ಕಾನ್ಪರೆನ್ಸ್ ಸಭಾಂಗಣದಲ್ಲಿ ನಡೆದ ವಿಧಾನಸಭಾ ಸಮಿತಿಯ ಸಭೆಯಲ್ಲಿ ಮಾತನಾಡಿದರು.

ಕೊಲ್ಲಿ ರಾಷ್ಟ್ರಗಳಿಗಿರುವ ವಿಮಾನ ಟಿಕೆಟ್ ದರ ಹೆಚ್ಚುತ್ತಿರುವುದು, ಅನಿವಾಸಿ ಮಲಯಾಳಿಗಳಿಗೆ ವಿದೇಶಗಳಲ್ಲಿ ಕಾನೂನು ಸಹಾಯ ಲಭಿಸಲು ಕ್ರಮ, ಮೃತದೇಹಗಳನ್ನು ಹುಟ್ಟೂರಿಗೆ ತರುವ ಸಂದರ್ಭದಲ್ಲಿ ಅಮಿತ ದರ ಪಡೆಯುವುದರ ಬಗ್ಗೆ ರಾಜ್ಯ, ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂಬ ವಿಷಯಗಳ ಬಗ್ಗೆ ಗಂಭೀರ ಚರ್ಚೆಗಳು ನಡೆದು, ಮುಖ್ಯಮಂತ್ರಿ, ಪ್ರಧಾನಮಂತ್ರಿಯೊಂದಿಗೆ ಈ ವಿಷಯದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿದರೂ ಕೇಂದ್ರ ಸರಕಾರದಿಂದ ಯಾವುದೇ ಕ್ರಮ ಆಗಲಿಲ್ಲ ಎಂದು ಸಭೆಯಲ್ಲಿ ಅಭಿಪ್ರಾಯಗಳು ಕೇಳಿಬಂದವು.

ಅನಿವಾಸಿ ಕಲ್ಯಾಣ ನಿಧಿ ಮಂಡಳಿಯ ಚಟುವಟಿಕೆ ಎಲ್ಲಾ ಜಿಲ್ಲೆಗಳಲ್ಲೂ ಆರಂಭಿಸುವುದಕ್ಕಾಗಿ ಪ್ರಸ್ತುತ ಕಲೆಕ್ಟರೇಟಿನಲ್ಲಿ ಕಾರ್ಯಾಚರಿಸುತ್ತಿರುವ ನೋರ್ಕಾರೂಟ್ಸ್ ಕಚೇರಿಗಳಲ್ಲಿ ಸೌಕರ್ಯವನ್ನು ಕಲ್ಪಿಸುವುದು, ಹೆಚ್ಚಿನ ಸಿಬ್ಬಂದಿಯನ್ನು ಇದಕ್ಕಾಗಿ ನೇಮಿಸುವುದು, ರಾಜ್ಯದ ಆನಿವಾಸಿಗಳ ಸಮಗ್ರ ಮಾಹಿತಿ ಸಂಗ್ರಹವನ್ನು ನಡೆಸಲು ಕುಟುಂಬ ಶ್ರೀಗೆ ಜವಾಬ್ದಾರಿ ವಹಿಸಿಕೊಡಲು ನಿರ್ದೇಶಿಸುವುದು,  ಕಲ್ಯಾಣ ಸೌಲಭ್ಯಗಳಿಗಾಗಿ 10 ವರ್ಷ ಪರಿಮಿತಗೊಳಿಸುರುವುದನ್ನು ತಿದ್ದುಪಡಿ ಮಾಡಲು ಆಗ್ರಹಿಸುವುದು, ಅನಿವಾಸಿ ಪುನರ್ವಸತಿ ಯೋಜನೆಯನ್ನು ಕಾರ್ಯಗತಗೊಳಿಸುವ ಕುರಿತು ಮುಖ್ಯಮಂತ್ರಿಯ ಗಮನಕ್ಕೆ ತರಲು ಸಭೆ ತೀರ್ಮಾನಿಸಿತು.