ಈಗ ಚೆಕ್ ಕ್ಲಿಯರೆನ್ಸಿಗಾಗಿ ದಿನಗಟ್ಟಲೆ ಕಾಯಬೇಕು

ಬೆಂಗಳೂರು : ನೋಟು ಅಮಾನ್ಯೀಕರಣಗೊಂಡು ಒಂದೂವರೆ ತಿಂಗಳು ಕಳೆದ ನಂತರ ಬ್ಯಾಂಕುಗಳು ಹಾಗೂ ಎಟಿಎಂಗಳ ಮುಂದೆ ಕಂಡು ಬರುತ್ತಿರುವ ಸರತಿ ಸಾಲುಗಳು ಸ್ವಲ್ಪ ಕಡಿಮೆಯಾಗಿದೆಯೆಂದು ಕಂಡುಬಂದರೂ ಬ್ಯಾಂಕುಗಳ ಗ್ರಾಹಕರು ಇದೀಗ ಚೆಕ್ಕುಗಳ ಕ್ಲಿಯರೆನ್ಸಿಗಾಗಿ ಬಹಳಷ್ಟು ದಿನಗಳ ಕಾಲ ಕಾಯುವ ಪ್ರಸಂಗ ಒದಗಿಬಂದಿದೆ. ತಮ್ಮ ಚೆಕ್ಕುಗಳು ಕೆಲ ಸಂದರ್ಭ ಐದರಿಂದ ಆರು ದಿನಗಳಾದರೂ ಕ್ಲಿಯರ್ ಆಗುತ್ತಿಲ್ಲ ಎಂದು ಹಲವರು ದೂರಲಾರಂಭಿಸಿದ್ದಾರೆ.

“ನಗದು ಹಣ ವ್ಯವಹಾರದ ಬದಲು ಚೆಕ್ ಉಪಯೋಗಿಸಬೇಕೆಂದು ಕೇಂದ್ರ ಸರಕಾರ ಹೇಳುತ್ತಿದೆ. ಆಸ್ಪತ್ರೆಗಳ ಬಿಲ್ ಸಂದಾಯ ಮಾಡಲೂ ಚೆಕ್ ಉಪಯೋಗಿಸುವಂತೆ ಹೇಳಲಾಗುತ್ತಿದೆ. ಆದರೆ ಇದು ಅಷ್ಟು ಸುಲಭವಲ್ಲ. ಏಕೆಂದರೆ  ಚೆಕ್ ಕ್ಲಿಯರೆನ್ಸಿಗಾಗಿ ಐದರಿಂದ ಆರು ದಿನಗಳ ತನಕ ಕಾಯಬೇಕಾಗಿರುವುದರಿಂದ ಅದು ಹಲವು ಸಮಸ್ಯೆಗಳನ್ನು ಸೃಷಿಸುತ್ತಿದೆ” ಎಂದು ಅನೀಶ್ ಕುಮಾರ್ ಎಂಬ ಟೆಕ್ಕಿ ದೂರುತ್ತಾರೆ.

ಕನ್ನಡ ಚಿತ್ರ ನಿರ್ಮಾಪಕ ಕೆ ಎಂ ವೀರೇಶ್ ಕೂಡ ಚೆಕ್ ವಿಚಾರದಲ್ಲಿ ತಮಗೆ ಇದೇ ಅನುಭವವಾಗಿದೆ ಎಂದು ಹೇಳುತ್ತಾರೆ.

ಆದರೆ ಬ್ಯಾಂಕ್ ಮ್ಯಾನೇಜರ್ ಒಬ್ಬರ ಪ್ರಕಾರ ಅವರು ಕೆಲ ದಿನಗಳ ಹಿಂದೆ ಇದೇ ಸಮಸ್ಯೆಯನ್ನು ಎದುರಿಸಿದ್ದರೂ  ಈಗ ಪರಿಸ್ಥಿತಿ ಸುಧಾರಿಸಿದೆ.