ಸೂಕ್ತ ವಿಳಾಸವಿಲ್ಲದೇ ಸಮಸ್ಯೆ : ನಿಯಮ ಉಲ್ಲಂಘಿಸಿದವರಿಗೆ ತಲುಪದ ನೊಟೀಸ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಸ್ತೆ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರಿಗೆ ಸಂಚಾರಿ ಪೊಲೀಸರು ನೋಟಿಸ್ ಜಾರಿ ಮಾಡುತ್ತಾರೆ. ಆದರೆ ಕಳೆದ 13 ತಿಂಗಳಲ್ಲಿ ಸರಿಸುಮಾರು 63,101 ನೋಟೀಸುಗಳು ಸೂಕ್ತ ವಿಳಾಸ ಪತ್ತೆಯಾಗದ ಕಾರಣ ತಪ್ಪಿತಸ್ಥರಿಗೆ ತಲುಪಿಲ್ಲ. ಸಾರಿಗೆ ಇಲಾಖೆಯಲ್ಲಿ ವಾಹನ ಮಾಲಕರ ವಿಳಾಸವನ್ನು ಸರಿಯಾಗಿ ನಮೂದಿಸದಿರುವ ಕಾರಣ ಮತ್ತು ತಾಂತ್ರಿಕ ಸಮಸ್ಯೆಯಿಂದಾಗಿ ದಂಡ ರೂಪದ ನೋಟಿಸುಗಳು ಮಾಲಕರಿಗೆ ತಲುಪುತ್ತಿಲ್ಲ.

2017ರಲ್ಲಿ ಸಂಚಾರಿ ಪೊಲೀಸರು ರಸ್ತೆ ನಿಯಮಗಳನ್ನು ಉಲ್ಲಂಘಿಸಿದ 1.08 ಲಕ್ಷ ಮಂದಿಗೆ ನೋಟಿಸ್ ಜಾರಿ ಮಾಡಿದ್ದರು. ಆದರೆ ಅದರಲ್ಲಿ ಕೇವಲ 66,696 ಮಾತ್ರ ಮೂಲ ವಾರಸುದಾರರಿಗೆ ತಲುಪಿದೆ. ಇವರಿಂದ ದಂಡದ ರೂಪದಲ್ಲಿ 28.94 ಲಕ್ಷ ರೂ ವಸೂಲು ಮಾಡಲಾಗಿದೆ. 52,487 ಪ್ರಕರಣಗಳಲ್ಲಿ ನೋಟಿಸ್ ನೀಡಲಾಗಿಲ್ಲ. 2018ರಲ್ಲಿ ಕೇವಲ 14,944 ಮಂದಿಗೆ ಮಾತ್ರ ನೋಟಿಸ್ ಜಾರಿ ಮಾಡಲಾಗಿದೆ. ಈ ಮೂಲಕ 6.86 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ. 10,614 ಮಂದಿಗೆ ನೋಟಿಸ್ ಇನ್ನೂ ನೀಡಲಾಗಿಲ್ಲ.

 

ಸಂಚಾರಿ ನಿಯಮಗಳ ಉಲ್ಲಂಘನೆ, ಹೆಲ್ಮೆಟ್ ರಹಿತ ಚಾಲನೆ, ನಿರ್ಲಕ್ಷ್ಯದ ಚಾಲನೆ, ಸೀಟ್ ಬೆಲ್ಟ್ ಹಾಕದಿರುವುದು, ಟ್ರಾಫಿಕ್ ಸಿಗ್ನಲ್ ದಾಟುವಿಕೆ, ಏಕಮುಖ ಸಂಚಾರವನ್ನು ಉಲ್ಲಂಘಿಸಿವುದು ಸೇರಿದಂತೆ ಹಲವು ಪ್ರಕರಣಗಳಲ್ಲಿ ನೋಟಿಸ್ ಜಾರಿ ಮಾಡಲಾಗುತ್ತಿದೆ. ಸರಿಯಾದ ವಿಳಾಸವನ್ನು ಪತ್ತೆ ಹಚ್ಚಲು ಸಾಧ್ಯವಾಗದ ಹಿನ್ನೆಲೆಯಲ್ಲಿ ದಂಡ ವಸೂಲಿಗೆ ತೊಂದರೆ ಉಂಟಾಗಿದೆ. 66,000 ಮಂದಿಯ ಪ್ರಕರಣಗಳಲ್ಲೂ ಇದೇ ರೀತಿ ಆಗಿದೆ. ಡಾಟಾ ಆಪರೇಟರುಗಳು ತಪ್ಪು ವಿಳಾಸ ನಮೂದಿಸಿದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.

 

 

LEAVE A REPLY