ಕೋರ್ಟ್ ಆದೇಶ ಧಿಕ್ಕರಿಸಿದ ಶೋಭಾ ಕರಂದ್ಲಾಜೆಗೆ ನೋಟಿಸ್

ಬೆಂಗಳೂರು : ಶಿವಾಜಿನಗರದ ಆರ್ ಎಸ್ ಎಸ್ ಕಾರ್ಯಕರ್ತ ಎಂ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಆರ್ ರೋಷನ್ ಬೇಗ್ ವಿರುದ್ಧ ಆರೋಪ ಮಾಡಿದ ಮಾಜಿ ಸಚಿವೆ ಶೋಭಾ ಕರಂದ್ಲಾಜೆಗೆ ನ್ಯಾಯಾಲಯ ಮತ್ತೆ ಸಮನ್ಸ್ ನೀಡಿದೆ.

ರುದ್ರೇಶ್ ಕೊಲೆ ಪ್ರಕರಣದಲ್ಲಿ ಸಚಿವ ರೋಷನ್ ಬೇಗ್ ಅವರ ನೇರಾ ಕೈವಾಡವಿದೆ ಎಂದು ಹೇಳಿಕೆ ನೀಡಿದ್ದ ಕರಂದ್ಲಾಜೆ ವಿರುದ್ಧ ಸತ್ರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಷನ್ ಬೇಗ್ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ನ್ಯಾಯಾಲಯ ಈ ಹಿಂದೆ ಆದೇಶವನ್ನೂ ಸಹ ನೀಡಿತ್ತು.

ಆದರೂ ಕರಂದ್ಲಾಜೆ ಇತ್ತೀಚೆಗೆ ಖಾಸಗಿ ಚಾನೆಲ್‍ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮತ್ತೆ ಬೇಗ್ ವಿರುದ್ಧ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶೋಭಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಈ ಕುರಿತು ತಕರಾರು ಅರ್ಜಿ ಸಲ್ಲಿಸುವಂತೆ 62ನೇ ಸತ್ರ ನ್ಯಾಯಾಲಯ ಶೋಭಾರಿಗೆ ನೋಟೀಸು ನೀಡಿದೆ. ಅರ್ಜಿದಾರರ ಪರ ನ್ಯಾಯವಾದಿ ಶಂಕರಪ್ಪ ವಾದ ಮಂಡಿಸಿದರು.