ತನಿಖೆಗೆ ಠಾಣೆಗೆ ಹಾಜರಾಗಲು ಗುರುಪುರ ಸ್ವಾಮಿಗೆ ನೊಟೀಸ್

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಬಿ ಸಿ ರೋಡಿನ ಉದಯ ಲಾಂಡ್ರಿ ಮಾಲಕರ ಪುತ್ರ ಶರತ್ ಮಡಿವಾಳ ಹತ್ಯೆಗೆ ಸಂಬಂಧಿಸಿ ತನ್ನ ಬಳಿ ಸ್ಫೋಟಕ ಮಾಹಿತಿ ಇದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಗೆ ವಿಚಾರಣೆಗೆ ಹಾಜರಾಗುವಂತೆ ಬಂಟ್ವಾಳ ಪೊಲೀಸರು ಶನಿವಾರ ನೋಟೀಸು ಜಾರಿಗೊಳಿಸಿದ್ದಾರೆ.

ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಸ್ವಾಮಿ “ಶರತ್ ಹತ್ಯೆಗೆ ಸಂಬಂಧಿಸಿ ಸ್ಫೋಟಕ ಮಾಹಿತಿ ನನ್ನ ಬಳಿ ಇದೆ. ರಾಷ್ಟ್ರೀಯ ತನಿಖಾ ಸಂಸ್ಥೆಗೆ ಅದನ್ನು ನೀಡಲಿದ್ದೇನೆ” ಎಂದಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣದ ತನಿಖಾಧಿಕಾರಿ ಬಂಟ್ವಾಳ ನಗರ ಠಾಣೆಗೆ ಬಂದು ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಪೊಲೀಸರು ನೊಟೀಸು ಜಾರಿಗೊಳಿಸಿದ್ದಾರೆ.


ಅಪರಾಧಿಗಳ ಮಾಹಿತಿ ಗುಟ್ಟು ಮಾಡಿದ್ರೆ ಅಪರಾಧ

ಗುರುಪುರ ಸ್ವಾಮಿಗೆ ಖಾದರ್ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಶರತ್ ಮಡಿವಾಳ ಸಾವಿಗೆ ಸಂಬಂಧಿಸಿದಂತೆ ತನ್ನಲ್ಲಿ ಸ್ಫೋಟಕ ಸುದ್ದಿ ಇದೆ ಎಂದು ಗುರುಪುರ ರಾಜಶೇಖರಾನಂದ ಸ್ವಾಮಿ ಹೇಳುತ್ತಿದ್ದಾರೆ. ಅವರಲ್ಲಿ ಅಂತಹ ಮಾಹಿತಿ ಇದ್ದಲ್ಲಿ ಅದನ್ನು ಕೂಡಲೇ ಪೊಲೀಸರಿಗೆ ನೀಡಬೇಕು. ಆರೋಪಿಗಳನ್ನು ಬಂಧಿಸಲು ಅವರು ಸಹಕಾರ ನೀಡಬೇಕು. ಆದರೆ ಇಂತಹ ಮಾಹಿತಿಗಳನ್ನು ಗುಟ್ಟಲ್ಲಿ ಇಡುವುದು ಕೂಡಾ ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗುತ್ತದೆ” ಎಂದು ಸಚಿವ ಯು ಟಿ ಖಾದರ್ ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಸ್ವಾಮಿಗೆ ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ಲಾಂದ್ರೆ ಏನರ್ಥ ? ಜನರು ಆರೋಪಿಗಳು ಯಾರು, ಯಾವ ಉದ್ದೇಶಕ್ಕೆ ಕೊಲೆ ನಡೆಸಿದೆ ಎಂದು ತಿಳಿಯಲು ಕಾತರರಾಗಿದ್ದಾರೆ” ಎಂದರು.

ಶರತ್ ಸಾವಿನ ಸುದ್ದಿಯನ್ನು 20 ಗಂಟೆಗಳ ಕಾಲ ತಡವಾಗಿ ಘೊಷಿಸಿರುವುದು ಏಕೆಂದು ಅವರು ಆಸ್ಪತ್ರೆಯ ಅಧಿಕೃತರನ್ನು ಪ್ರಶ್ನಿಸಬೇಕು. ಜಿಲ್ಲಾಡಳಿತ ಮತ್ತು ಆಸ್ಪತ್ರೆ ಆಡಳಿತ ಮಂಡಳಿ ಇದಕ್ಕೆ ಉತ್ತರಿಸಬೇಕು. ನಾನು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಾರಲ್ಲೂ ಮಾತನಾಡಿಲ್ಲ. ಈ ಬಗ್ಗೆ ರಾಜಕೀಯ ಮಾಡುವುದು ಅನಗತ್ಯ” ಎಂದರು.

“ಸರಕಾರಕ್ಕೆ ವರದಿ ಹೋದ ಬಳಿಕ ಮೃತ ಕುಟುಂಬಕ್ಕೆ ಪರಿಹಾರವನ್ನು ಸರಕಾರ ನೀಡಲಿದೆ. ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು ಕೂಡಾ ಆಸ್ಪತ್ರೆ ವೆಚ್ಚದ ಬಿಲ್ ತೋರಿಸಿದರೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಒದಗಿಸಲು ಪ್ರಯತ್ನಿಸುತ್ತೇನೆ” ಎಂದರು.


ಸ್ವಾಮಿ ಪೊಲೀಸರಿಗೆ ಮಾಹಿತಿ ನೀಡದೇ ಇದ್ದಲ್ಲಿ ಕಾನೂನು ಕ್ರಮಕ್ಕೆ ಡಿವೈಎಫೈ ಆಗ್ರಹ

ಮಂಗಳೂರು : ಶರತ್ ಹತ್ಯೆ ಹಂತಕರ ಬಗ್ಗೆ ತನ್ನಲ್ಲಿ ಮಾಹಿತಿ ಇದೆ ಎಂದು ಹೇಳಿರುವ ಗುರುಪುರ ಮಠದ ವಜ್ರದೇಹಿ ಸ್ವಾಮಿ ಕೂಡಲೇ ಈ ವಿಚಾರವನ್ನು ಪೊಲೀಸ್ ಇಲಾಖೆಗೆ ತಿಳಿಸಬೇಕು. ಇಲ್ಲದೇ ಇದ್ದಲ್ಲಿ ಪೊಲೀಸ್ ಇಲಾಖೆ ಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ ಎಂದು ಡಿವೈಎಫೈ ಸಂಘಟನೆ ಆಗ್ರಹಿಸಿದೆ.

“ಸ್ವಾಮಿ ಜವಾಬ್ದಾರಿ ಸ್ಥಾನದಲ್ಲಿರುವವರಾಗಿದ್ದಾರೆ. ಶರತ್ ಕೊಲೆಗಾರರ ಬಗ್ಗೆ ಅವರಲ್ಲಿ ಮಾಹಿತಿ ಇದ್ದರೆ ಅವರು ಕೂಡಲೇ ಪೊಲೀಸ್ ಇಲಾಖೆಗೆ ನೀಡಬೇಕು. ಈ ಮೂಲಕ ಶರತ್ ಹಂತಕರ ಬಂಧನಕ್ಕೆ ಸಹಕರಿಸಬೇಕು. ಈ ನೆಲದ ಕಾನೂನು ಪ್ರಕಾರ ನಾಗರಿಕನ ಕರ್ತವ್ಯವೂ ಆಗಿದೆ. ಇಲ್ಲದೇ ಇದ್ದಲ್ಲಿ ಕೂಡಲೇ ಸ್ವಾಮಿಯನ್ನು ಪೊಲೀಸರು ಬಂಧಿಸಬೇಕು’ ಎಂದು ಡಿವೈಎಫೈ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಗ್ರಹಿಸಿದ್ದಾರೆ.