ದೇವರ ಕೃಪೆ ಇಲ್ಲದೇ ಏನೂ ಸಾಧ್ಯವಿಲ್ಲ : ಶೃಂಗೇರಿ ಶ್ರೀ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : “ದೇವರ ಕೃಪೆ ಇಲ್ಲದೇ ಏನೂ ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ದೇವರ ಮೇಲೆ ಶೃದ್ಧಾ ಭಕ್ತಿ ಹೊಂದಬೇಕು” ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮಿಗಳು ಹೇಳಿದರು.

ಇಲ್ಲಿನ ಮಾವಿನಕುರ್ವೆ ಬಂದರಿನಲ್ಲಿ ಗುರುವಾರ ಶ್ರೀ ಕುಟುಮೇಶ್ವರ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವರ ಪುನರ್ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ ನೆರವೇರಿಸಿದ ಬಳಿಕ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, “ಎಲ್ಲರ ಯಶಸ್ಸಿಗೂ ದೇವರ ಕೃಪೆ ಇರಲೇ ಬೇಕು. ದೇವರ ಕೃಪೆ ಇಲ್ಲದಿದ್ದಲ್ಲಿ ಹುಲ್ಲು ಕಡ್ಡಿಯೂ ಅಲುಗಾಡಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಪ್ರತಿದಿನ ದೇವರ ಸ್ಮರಣೆಯಲ್ಲಿ ನಿರತರಾಗಬೇಕು. ದೇವರ ಮೇಲೆ ನಂಬಿಕೆ ಇಟ್ಟರೆ ಮನುಷ್ಯನ ಕಷ್ಟವೆಲ್ಲವೂ ನಿವಾರಣೆಯಾಗುತ್ತದೆ. ದೇವರ ಮೇಲೆ ನಂಬಿಕೆ ಇಡುವುದು ಸನಾತನ ಪರಂಪರೆಯ ವೈಶಿಷ್ಟ್ಯವಾಗಿದೆ. ದೇವರಿಗೆ ನೈವೇದ್ಯವನ್ನು ಇಟ್ಟು ತದನಂತರದಲ್ಲಿ ನಾವು ಪ್ರಸಾದವನ್ನು ಸೇವನೆ ಮಾಡುವುದಕ್ಕೂ ಹೆಚ್ಚಿನ ಮಹತ್ವವಿದೆ. ಅದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಬಂದರಿನ ಜನರು ಉತ್ತಮವಾದ ಕಾರ್ಯ ಮಾಡಿದ್ದಾರೆ. ದೇವರ ಮತ್ತು ಧಾರ್ಮಿಕ ಕಾರ್ಯ ಮಾಡುವುದರಿಂದ ಸಮಾಜದಲ್ಲಿ ಉನ್ನತಿಯಾಗುತ್ತದೆ” ಎಂದರು.

ಶೃಂಗೇರಿ ಪೀಠದ ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ಶ್ರೀಗಳು ಆಶೀರ್ವಚನ ನೀಡುತ್ತಾ, “ಮನುಷ್ಯನಿಗೆ ಜೀವನದಲ್ಲಿ ದೈವಬಲ ಹಾಗೂ ಗುರುಬಲ ಅತ್ಯಂತ ಅವಶ್ಯವಾಗಿ ಬೇಕಾಗಿದೆ. ಇವೆರಡರಲ್ಲಿ ಒಂದರ ಬಲವಿಲ್ಲದಿದ್ದರೂ ಆತ ಯಾವುದೇ ಸಾಧನೆ ಮಾಡಲು ಹಾಗೂ ಸುಖವಾಗಿರಲು ಸಾಧ್ಯವಿಲ್ಲ. ಒಂದು ವೇಳೆ ದೇವರ ವಿಷಯದಲ್ಲಿ ಹಾಗೂ ಗುರುವಿನ ವಿಷಯದಲ್ಲಿ ತಪ್ಪಾಗಿ ನಡೆದುಕೊಂಡಲ್ಲಿ ಅದರ ಪರಿಣಾಮ ಗಂಭೀರವಾಗಿರುತ್ತದೆ” ಎಂದರು.