ನೋಟು ನಿಷೇಧದಿಂದ ಭಾರಿ ಅನಾಹುತ

ಕೇಂದ್ರ ಸರಕಾರ ಐನೂರು ಮತ್ತು ಒಂದು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಮುನ್ನ ಈ ದೇಶದ ಬಹುಸಂಖ್ಯಾತ ಜನರ ಬವಣೆಗಳ ಬಗ್ಗೆ ಕಿಂಚಿತ್ತೂ ಯೋಚಿಸದೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಪ್ರಸ್ತುತ ಸ್ಥಿತಿಯಿಂದ ಸ್ಪಷ್ಟವಾಗುತ್ತಿದೆ.

ಕಳೆದ ಇಪ್ಪತ್ತೈದು ದಿನಗಳಿಂದ ಜನರು ತಮ್ಮ ಬೇರೆಲ್ಲ ಕೆಲಸಗಳನ್ನು ಬಿಟ್ಟು, ದಿನನಿತ್ಯ ಬ್ಯಾಂಕ್, ಎಟಿಎಂಗಳ ಎದುರು ಅಲೆಯುವಂತಾಗಿದೆ. ಅದರಲ್ಲೂ ಗ್ರಾಮೀಣ ಭಾಗದ ರೈತಾಪಿ ವರ್ಗ ಅಧಿಕ ಮೊತ್ತದ ನೋಟಿನ ಅಮಾನ್ಯದಿಂದಾಗಿ ಭಾರೀ ತೊಂದರೆ ಅನುಭವಿಸಬೇಕಾಗಿದೆ. ಅವರ ಬೆಳೆಗಳು ಜನರ ಬಳಿ ಹಣವಿಲ್ಲದೆ ಮಾರಾಟವಾಗದ ಕಾರಣ ಬೀದಿ ಪಾಲಾಗುತ್ತಿವೆ. ನವೆಂಬರ್ 8ರಿಂದ ಇಲ್ಲಿತನಕ 75ಕ್ಕೂ ಹೆಚ್ಚು ಜನ ಬ್ಯಾಂಕ್ ಮುಂದೆ ಗಂಟೆಗಟ್ಟಲೆ ನಿಲ್ಲಲಾಗದೆ ಸಾವನ್ನಪ್ಪಿದ್ದಾರೆ.

ಯಾವುದೇ ಸೂಕ್ತ ಕ್ರಮಕೈಗೊಳ್ಳದೇ ಕಪ್ಪು ಹಣವನ್ನು ಹೋಗಲಾಡಿಸುವ ನೆಪ ಹೇಳಿ ಪ್ರಭುತ್ವ ಜನಸಾಮಾನ್ಯರ ದಿನನಿತ್ಯದ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ.

ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಇನ್ನೂ ಮೂರ್ನಾಲ್ಕು ತಿಂಗಳುಗಳ ಕಾಲ ಜನ ಹಣವಿಲ್ಲದೇ, ಎಟಿಎಂಗಳ ಮುಂದೆ ಕ್ಯೂ ನಿಲ್ಲುವುದು ತಪ್ಪುವುದಿಲ್ಲ ಎನ್ನಿಸುತ್ತಿದೆ. ಹಾಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಬದುಕನ್ನು ಸಹನೀಯ ಗೊಳಿಸುವತ್ತ ಸರಕಾರ ಅಲೋಚಿಸಿ ಕ್ರಮ ಕೈಗೊಳ್ಳಬೇಕೇ ಹೊರತು ಜನಸಾಮಾನ್ಯರ ಬದುಕಿನ ಜೊತೆಗೆ ಚೆಲ್ಲಾಟವಾಡುವುದು ಸರಿಯಲ್ಲ.

  • ಕೆ ಮನೋಹರ, ಪಂಪ್ವೆಲ್-ಮಂಗಳೂರು