`ನೋಟ್ ಬ್ಯಾನ್ ಬಗ್ಗೆ ಮಾಧ್ಯಮದಲ್ಲಿ ಅಸಹನೆಯಿದೆಯೇ ವಿನಹ ಜನರಲ್ಲಲ್ಲ’

`ರಸ್ತೆಯಲ್ಲಿ ಸಾಗುವವರು ನಗದು ಕೊರತೆಯಿಂದ ಸಮಸ್ಯೆಯೆದುರಿಸುತ್ತಿದ್ದರೂ ಅವರು ದೂರುತ್ತಿಲ್ಲ. ಪ್ರಧಾನಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆಂದು ಅವರಿಗನಿಸಿದೆ.’

ಸ್ವದೇಶಿ ಜಾಗರಣ್ ಮಂಚ್ ಇದರ ಸಹ ಸಂಚಾಲಕರಾಗಿರುವ ಅಶ್ವನಿ ಮಹಾಜನ್ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಕೂಡ ಆಗಿದ್ದಾರೆ. ಈ ಸಂದರ್ಶನದಲ್ಲಿ ಅವರು ನೀತಿ ಆಯೋಗದ ಕಾರ್ಯನಿರ್ವಹಣಾ ಶೈಲಿಯ ಬಗ್ಗೆ ತಮ್ಮ ಸಂಸ್ಥೆಗಿರುವ ಅಸಮಾಧಾನವನ್ನು ಹಾಗೂ ನೋಟು ಅಮಾನ್ಯೀಕರಣದ ವಿಚಾರದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.


  • ನೀತಿ ಆಯೋಗದ ‘ಕಾರ್ಪೊರೇಟ್ ಪರ’ ನೀತಿಗಳು ಸ್ವದೇಶಿ ಜಾಗರಣ್ ಮಂಚ್ ಅಸಮಾಧಾನಕ್ಕೆ ಕಾರಣವಾಗಿದೆಯೆಂದು ಹೇಳಲಾಗುತ್ತಿದೆ. ನೀತಿ ಆಯೋಗ ನಿಜವಾಗಿಯೂ ಕಾರ್ಪೊರೇಟುಗಳ ಪರವಾಗಿದೆಯೇ ?

ನೀತಿ ಆಯೋಗದ ಕೆಲವೊಂದು ನಿಲುವುಗಳು –  ಉದಾ ಜಿಎಂ ಬೆಳೆಗಳ ಕುರಿತು – ಅದರ ಧೋರಣೆ ಕಾರ್ಪೊರೇಟ್ ಪರ ಎಂದು ಹೇಳಬಹುದು. ಇಂತಹ ಬೆಳೆಗಳು ಪರಿಸರಕ್ಕೆ, ಮನುಷ್ಯತರ ಆರೋಗ್ಯಕ್ಕೆ ಹಾಗೂ ಜೀವವೈವಿಧ್ಯಕ್ಕೆ ಅಪಾಯಕಾರಿ.


  • ನೀತಿ ಆಯೋಗ ಪ್ರಜಾಪ್ರಭುತ್ವ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ನೀವು ಹೇಳಬಯಸುತ್ತೀರಾ ?

ಒಮ್ಮಿಂದೊಮ್ಮೆಗೆ  ಇಂತಹ ಹೇಳಿಕೆಯನ್ನು ನೀಡಲು ಸಾಧ್ಯವಿಲ್ಲ. ಆಯೋಗವು ಎಲ್ಲಾ ಸಂಬಂಧಿತರ ಹಾಗೂ ರಾಜ್ಯ ಸರಕಾರಗಳ ಅಭಿಪ್ರಾಯಗಳನ್ನು ಸಂಗ್ರಹಿಸಿಯೇ ಮುಂದಡಿಯಿಡುವುದು ಎಂದು ಅದನ್ನು ರಚಿಸಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದ್ದರು.


  • ನೋಟು ಅಮಾನ್ಯೀಕರಣದ ಬಗ್ಗೆ ಸ್ವದೇಶಿ ಜಾಗರಣ್ ಮಂಚ್ ಅಭಿಪ್ರಾಯವೇನು ? ಈ ಕ್ರಮದಿಂದ ಕಾಳಧನವನ್ನು ನಿರ್ಮೂಲನೆಗೈಯ್ಯಬಹುದೇ ?

ಇದೊಂದು ಉತ್ತಮ ನಿರ್ಧಾರವೆಂದು ನಮಗನಿಸುತ್ತದೆ. ನಾವು ಅದನ್ನು ಸ್ವಾಗತಿಸುತ್ತೇವೆ. ಒಬ್ಬ ದುರ್ಬಲ ಮತ್ತು ಅಪ್ರಾಮಾಣಿಕ ಪ್ರಧಾನಿ ಇಂತಹ ಕ್ರಮವನ್ನು ಕೈಗೊಳ್ಳಲು ಸಾಧ್ಯವಿಲ್ಲ. ನಗದು ಕೊರತೆಯಿಂದ ಸಣ್ಣ ವ್ಯಾಪಾರಸ್ಥರು ಸಮಸ್ಯೆಯೆದುರಿಸುತ್ತಿದ್ದಾರೆಂಬುದು ನಿಜ. ದೇಶದ ಆರ್ಥಿಕತೆಯ ಮೇಲೂ ಇದು ಪರಿಣಾಮ ಬೀರಿದೆ. ಆದರೆ ಇದೆಲ್ಲ ಅಲ್ಪಕಾಲದ ಸಮಸ್ಯೆಯಾಗಿದ್ದು ದೀರ್ಘಕಾಲದಲ್ಲಿ ಎಲ್ಲವೂ ಸರಿಯಾಗಿ ಈ ಕ್ರಮದ ಪ್ರಯೋಜನವನ್ನು ಜನ ಪಡೆಯುತ್ತಾರೆ. ನಕಲಿ ನೋಟುಗಳ ಹಾವಳಿಯೂ ಕಡಿಮೆಯಾಗುವುದಲ್ಲದೆ ಉಗ್ರವಾದ ಚಟುವಟಿಕೆಗಳ ಮೇಲೂ ಹೊಡೆತ ಬೀಳುವುದು. ನಗದು ಉಪಯೋಗ ಕಡಿಮೆಯಾಗುತ್ತಿದ್ದಂತೆಯೇ ಅದು ಹಣದುಬ್ಬರವನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಇದರಿಂದಾಗಿ ಕೈಗಾರಿಕಾ ಹಾಗೂ ಮೂಲಸೌಕರ್ಯಾಭಿವೃದ್ಧಿ ಕ್ಷೇತ್ರಗಳಿಗೆ ಬಂಡವಾಳ ಹರಿದು  ಬರುವುದು. ಹೀಗೆ ನಡೆದೇ ತೀರುವುದೆಂದು ಒಬ್ಬ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿ ನಾನು ಹೇಳಬಯಸುತ್ತೇನೆ. ಇದರಿಂದ ಆರ್ಥಿಕತೆಗೆ ಹಲವಾರು ಲಾಭಗಳಾಗಿ ವಿಶೇಷವಾಗಿ ಬಡವರಿಗೆ ಬಹಳಷ್ಟು ಪ್ರಯೋಜನವಾಗುವುದು.


  • ಆರ್ಥಿಕತೆಯನ್ನು ಪುನರುಜ್ಜೀವಗೊಳಿಸಲು ಸರಕಾರ  ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ ಹಣ ತೊಡಗಿಸಲಿದೆಯೇ ?

ಸಾಮಾಜಿಕ ಕ್ಷೇತ್ರ ಹಾಗೂ ಮೂಲಸೌಕರ್ಯ ಅಭಿವೃದ್ಧಿ  ಕ್ಷೇತ್ರಗಳಲ್ಲಿ ಸರಕಾರ ಹಣ ತೊಡಗಿಸುವುದೆಂದು ನಾನು ನಿರೀಕ್ಷಿಸುತ್ತೇನೆ. ಬಡ್ಡಿ ದರಗಳು ಕಡಿಮೆಯಾದಾಗ ಖಾಸಗಿ ರಂಗಗಳೂ ಹೂಡಿಕೆ ಮಾಡಲು ಆಸಕ್ತಿ ತೋರಿಸಲಿವೆ. ನೋಟು ಅಮಾನ್ಯೀಕರಣದಿಂದ  ಅಭಿವೃದ್ಧಿ ಪ್ರಮಾಣದಲ್ಲಿ ಕುಸಿತವಾಗುವುದೆಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಗೆ ನಾನು ಸಹಮತ ವ್ಯಕ್ತಪಡಿಸುತ್ತೇನೆ. ಆದರೆ ಅವರು ಉಲ್ಲೇಖಿಸಿದ ಪ್ರಮಾಣದ ಬಗ್ಗೆ ಮಾತ್ರ ನಾನು ಅವರೊಂದಿಗೆ ಸಹಮತ ಹೊಂದಿಲ್ಲ. ಅಭಿವೃದ್ಧಿ ಪ್ರಮಾಣ ಶೇ 1ರಷ್ಟು ಕಡಿಮೆಯಾಗಬಹುದೇ ವಿನಹ ಅದಕ್ಕಿಂತ ಹೆಚ್ಚಲ್ಲವೆಂದು ನನ್ನ ಅನಿಸಿಕೆ. ಅಭಿವೃದ್ಧಿ ಪ್ರಮಾಣ ಮುಂದಿನ ನಾಲ್ಕರಿಂದ ಎಂಟು ತಿಂಗಳೊಳಗೆ ಮತ್ತೆ ವೇಗ ಪಡೆದುಕೊಳ್ಳಬಹುದು.


  • ಅಷ್ಟು ಸಮಯ ಕಾಯಲು ಜನರಲ್ಲಿ  ತಾಳ್ಮೆಯಿರುವುದೇ ?

ನಾನು ಮಾಧ್ಯಮ ಮಂದಿಯಲ್ಲಿ ಅಸಹನೆಯನ್ನು ನೋಡುತ್ತಿದ್ದೇನೆಯೇ ವಿನಹ ಜನರಲ್ಲಲ್ಲ. ರಸ್ತೆಯಲ್ಲಿ ಸಾಗುವವರು ನಗದು ಕೊರತೆಯಿಂದ ಸಮಸ್ಯೆಯೆದುರಿಸುತ್ತಿದ್ದರೂ ಅವರು ದೂರುತ್ತಿಲ್ಲ. ಪ್ರಧಾನಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆಂದು ಅವರಿಗನಿಸಿದೆ. ಆರ್ಥಿಕತೆಗೆ ಅಗತ್ಯವಿದ್ದಷ್ಟು ನಗದು ಹಣವನ್ನು ಮತ್ತೆ ಚಲಾವಣೆಗೆ ತಂದರೆ ನಗದು ಕೊರತೆ ಸಮಸ್ಯೆ ತನ್ನಿಂತಾನಾಗಿಯೇ ನಿವಾರಣೆಯಾಗುವುದು.


  • ಭಾರತವು ಕ್ಯಾಶ್ ಲೆಸ್ ಆರ್ಥಿಕತೆಗೆ ಸಿದ್ಧವಾಗಿದೆಯೆಂದು ನಿಮಗನಿಸುತ್ತದೆಯೇ ?

ನನ್ನ ಪ್ರಕಾರ ಸದ್ಯಕ್ಕೆ ಶೇ 100 ಯಾ ಶೇ 50ರಷ್ಟು ಕ್ಯಾಶ್ ಲೆಸ್ ಆರ್ಥಿಕತೆ ಕೂಡ ಅಸಾಧ್ಯ. ಅದೊಂದು ನಿಧಾನ ಪ್ರಕ್ರಿಯೆ. ಎಲ್ಲವೂ  ಜನರ  ಮೇಲೆ ಅವಲಂಬಿತವಾಗಿದೆ. ಅವರು ನಗದು, ಚೆಕ್ ಯಾ ಡಿಜಿಟಲ್ ಹಣ ಉಪಯೋಗಿಸಲು ಮನಸ್ಸು ಮಾಡುತ್ತಾರೆಯೇ ಎಂದು ನೋಡಬೇಕಾಗಿದೆ. ಅಭ್ಯಾಸಗಳನ್ನು ಬಿಡುವುದು  ಕಷ್ಟ. ಆದುದರಿಂದ ಕ್ಯಾಶ್ ಲೆಸ್ ಆಗಲು ಭಾರತೀಯ ಆರ್ಥಿಕತೆಗೆ ಇನ್ನಷ್ಟು ಸಮಯ ಬೇಕಾಗಬಹುದು. ಆದರೆ ಕ್ಯಾಶ್ ಲೆಸ್ ಹೆಸರಿನಲ್ಲಿ ನಾವು  ವಿದೇಶಿ ಬಂಡವಾಳ ತರುವ ಬಹುರಾಷ್ಟ್ರೀಯ ಕಂಪೆನಿಗಳನ್ನು ಬೆಂಬಲಿಸಬಾರದು. ಡಾಟಾ ಕಳವಿನ ಅಪಾಯವೂ ಕ್ಯಾಶ್ ಲೆಸ್ ಆರ್ಥಿಕತೆ ತಂದೊಡ್ಡಬಹುದು. ಇದೇ ಕಾರಣಕ್ಕೆ ಚೀನೀ ಬಂಡವಾಳ ಹೊಂದಿರುವ ಪೇಟಿಎಂ ಅನ್ನು ನಾವು ವಿರೋಧಿಸುತ್ತಿದ್ದೇವೆ.