ಬಡವರ, ಜನಸಾಮಾನ್ಯರ ಮೇಲೆ ಮೋದಿ ಗದಾಪ್ರಹಾರ : ಅಭಯ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಪ್ರಧಾನಿ ನರೇಂದ್ರ ಮೋದಿಯವರ ನೋಟು ನಿಷೇಧ ನಿರ್ಧಾರ ಬಡವರ ಹಾಗೂ ಜನಸಾಮಾನ್ಯರ ಮೇಲೆ ವ್ಯತಿರಿಕ್ತ  ಪರಿಣಾಮ ಬೀರಿದೆ ಎಂದು ಆರೋಪಿಸಿ  ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಚಿವ ಅಭಯಚಂದ್ರ ಜೈನ್  ನೇತೃತ್ವದಲ್ಲಿ ಕಾರ್ನಾಡಿನಿಂದ ಮುಲ್ಕಿ ವಿಜಯಾ ಬ್ಯಾಂಕ್ ತನಕ `ಆಕ್ರೋಶ್ ದಿವಸ್’ ಅಂಗವಾಗಿ ಕೇಂದ್ರ ಸರಕಾರ ಹಾಗೂ ಮೋದಿ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬಳಿಕ ಸಭೆಯನ್ನುದ್ದೇಶಿಸಿ ಅಭಯಚಂದ್ರ ಮಾತನಾಡಿ “ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಳಧನದಿಂದ ಗೆದ್ದು ಪ್ರಧಾನಿಯಾದ ನರೇಂದ್ರ ಮೋದಿಯವರು ಕಾಳಧನದ ಪರವಾಗಿಯೇ ಇದ್ದಾರೆ. ದೇಶದಲ್ಲಿ ಏಕಾಏಕಿ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಮೂಲಕ ಬಡವರ ಜನಸಾಮಾನ್ಯರ ಮೇಲೆ ಸರಕಾರ ಗದಾಪ್ರಹಾರ ನಡೆಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಹತ್ತು ಕೋಟಿ ರೂಪಾಯಿ ಮೌಲ್ಯದ ಸೂಟು ಧರಿಸುವ ಅವರು ಐಷಾರಾಮಿ  ಜೀವನ ನಡೆಸುತ್ತಾ ಇದೀಗ ಏಕಾಏಕಿ ನೋಟು ಬ್ಯಾನ್ ಮೂಲಕ  ಜನ ಸಾಮಾನ್ಯರಿಗೆ ಮರೆಯಲಾಗದ ಏಟು ನೀಡಿದ್ದಾರೆ. ಇದು ಮೋದಿ ಉದ್ಧಟತನದ ಪ್ರತೀಕವಾಗಿದೆ” ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಬಡವರು ಜನಸಾಮನ್ಯರು ದುಡಿದು ಬ್ಯಾಂಕಿನಲ್ಲಿ ಹಾಕಿದ ಹಣ ಸರಿಯಾದ ಸಮಯದಲ್ಲಿ ಅವರಿಗೆ ದೊರೆಯದಿದ್ದರೆ ಏನು ಮಾಡಬೇಕು ಎಂದವರು ಕೇಳಿದರು. ಕಾಂಗ್ರೆಸ್ ಪಕ್ಷವು ಬಿಜೆಪಿಯಂತೆ ಯಾವತ್ತೂ ಬಂದ್ ನಡೆಸದು. ಬಂದ್ ನಡೆಸಿದರೆ ಜನಸಾಮಾನ್ಯರ ದೈನಂದಿನ ಜೀವನಕ್ಕೆ ತೊಡಕಾಗುವುದರಿಂದ ಆಕ್ರೋಶ್ ದಿವಸ್ ಹಮ್ಮಿಕೊಳ್ಳಲಾಗಿದೆ ಎಂದು ಜೈನ್ ಹೇಳಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಮಾತನಾಡಿ ಮೋದಿಯವರ ನೋಟು ಬ್ಯಾನ್ ಬಳಿಕ ಸರತಿ ಸಾಲಿನಲ್ಲಿ ನಿಂತು ಬಸವಳಿದ 68 ಮಂದಿ ಅಸುನೀಗಿದ್ದಾರೆ. ಇದಕ್ಕೆ ಮೋದಿಯವರೇ ನೇರ ಹೊಣೆ ಎಂದ ಅವರು, 360 ಕೋಟಿ ರೂಪಾಯಿ ಕಾಳಧನ ಸಂಗ್ರಹಿಸಿ ಮೋದಿ ಪ್ರಧಾನಿಯಾಗಿದ್ದಾರೆ ಎಂದು ಆರೋಪಿಸಿದರು. ಅವರು ಚುನಾವಣೆಗೆ ಖರ್ಚು ಮಾಡಿದ ಹಣದ ವಿವರ ದೇಶದ ಜನತೆಗೆ ನೀಡಬೇಕೆಂದು ಆಗ್ರಹಿಸಿದರು.

ಇದೇ ವೇಳೆ ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತು ಅನಾರೋಗ್ಯಪೀಡಿತರಾಗಿ ಅಸುನೀಗಿದ ದೇಶದ 68 ಮಂದಿಯ ಆತ್ಮಕ್ಕೆ ಶಾಂತಿ ಕೋರಿ 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ಪಕ್ಷದ ಮುಖಂಡರುಗಳಾದ  ವಸಂತ್ ಬೆರ್ನಾರ್ಡ್, ಸಾಹುಲ್ ಹಮೀದ್, ಬಿ ಎಮ್ ಆಸಿಫ್, ಪುತ್ತು ಬಾವ,  ಸಂದೀಪ್ ಚಿತ್ರಾಪು, ಬಶೀರ್ ಕುಳಾಯಿ, ಅಶೋಕ್ ಪೂಜಾರ್, ಮತ್ತಿತರರು ಇದ್ದರು. ಬಳಿಕ ಕಾರ್ನಾಡಿನಲ್ಲಿರುವ ನಾಡ ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ಆಕ್ರೋಶ್ ದಿವಸ್ ಅಂಗವಾಗಿ ತಹಶೀಲ್ದಾರ್ ಕಿಶೋರ್ ಕುಮಾರ್ ಅವರಿಗೆ ಮನವಿಯನ್ನು ಅರ್ಪಿಸಲಾಯಿತು.