ನೋಟು ಅಮಾನ್ಯದಿಂದ ಎಡವಟ್ಟೇ ಹೆಚ್ಚು

ರೂಪಾಯಿ ಐನೂರು ಮುಖಬೆಲೆಯ ನೋಟನ್ನು ಯಾವ ಆಧಾರದಲ್ಲಿ ಹೆಚ್ಚು ಮೌಲ್ಯದ ನೋಟು ಎಂಬುದಾಗಿ ತೀರ್ಮಾನಿಸಲಾಯಿತು ? ಸುಮಾರು ವರ್ಷಗಳಿಂದ ಈ ಮೌಲ್ಯದ ನೋಟುಗಳು ಸಾಮಾನ್ಯ ನಾಗರಿಕರ ಬಳಿಯೂ ಚಲಾವಣೆಯಲ್ಲಿವೆ. ಅಧಿಕ ಮೌಲ್ಯದ ನೋಟುಗಳಾದರೆ ಅವುಗಳು ಸಾಮಾನ್ಯ ಚಲಾವಣೆಯಲ್ಲಿ ಇರಲಾರವು. ಬಹಳ ವರ್ಷಗಳ ಹಿಂದೆ 5 ಮತ್ತು 10 ಸಾವಿರದ ಮೌಲ್ಯಗಳ ನೋಟುಗಳನ್ನು ರದ್ದುಪಡಿಸಲಾಗಿತ್ತು. ಅಂತಹ ನೋಟುಗಳನ್ನು ಸಾಮಾನ್ಯ ಪ್ರಜೆ ನೋಡಿರಲೂ ಇಲ್ಲ.

ಇನ್ನು ಕಪ್ಪು ಇಲ್ಲದಂತೆ ಮಾಡುವುದು ಉದ್ದೇಶವಾದರೆ, ಅದು ಸಫಲವಾಗಿಲ್ಲ ಎಂಬುದು ಇತ್ತೀಚೆಗೆ ಅಪರಾಧಗಳೆಂದು ಬಿಂಬಿಸಲಾದ 2000 ಮುಖಬೆಲೆಯ ನೋಟುಗಳು ಸಿಕ್ಕಿದ ಪ್ರಕರಣಗಳು ಎತ್ತಿ ತೋರಿಸುತ್ತಿವೆ.

ರಿಸರ್ವ್ ಬ್ಯಾಂಕಿನ ನೋಟುಗಳಿಗೆ ಕೇಂದ್ರ ಸರಕಾರವು ಗ್ಯಾರಂಟಿಯನ್ನು ಕಾನೂನಿನ ಮೂಲಕ ಕೊಡುತ್ತದೆ. ಬದಲಾವಣೆಗೆ ಅವಕಾಶವನ್ನೂ ಸರಿಯಾಗಿ ಕೊಡದೆ ನೋಟನ್ನು ಹಿಂಪಡೆದು ಅಂತÀಹ ಗ್ಯಾರಂಟಿಯನ್ನು ಮುರಿದಂತೆ ಅಲ್ಲವೇ ? ಕೇಂದ್ರ ಸರಕಾರವು ನಂಬಲರ್ಹವಲ್ಲ ಎಂಬುದಾಗಿ ಬಿಂಬಿಸಲಿಲ್ಲವೆ ?

ಯಾರಿಗೂ ಗೊತ್ತಾಗದಂತೆ ಮಾಡಿದ್ದು, ಕೆಟ್ಟ ಹಣವನ್ನು ಹೊರಗಿಡಲು ಎಂಬುದಾಗಿ ಪ್ರಚಾರ ನಡೆದಿದೆ. ಈ ಉದ್ದೇಶ ಇದ್ದುದಾದರೆ, ಮೊದಲ ಹೊಸ ನೋಟುಗಳನ್ನು ಸಾಕಷ್ಟು ಚಲಾವಣೆಯಲ್ಲಿ ಹಾಕಿ ಆ ಮೇಲೆ ಏಕಾಏಕಿ ಹಳೆಯುವುಗಳನ್ನು ಅಮಾನ್ಯ ಮಾಡಬಹುದಿತ್ತಲ್ಲೇ ? ಈ ಮೊದಲು ರಿಸರ್ವ್ ಬ್ಯಾಂಕಿನವರು 2009ರಿಂದ ಮೊದಲಿನ ನೋಟುಗಳನ್ನು ಅಮಾನ್ಯ ಮಾಡಿದಾಗ ಅವರು ಹಾಗೆ ಮಾಡುತ್ತಾರೆ ಎಂಬ ಪೂರ್ವ ಸೂಚನೆ ಏನಾದರೂ ಇತ್ತೇ ? ಆದಕಾರಣ ಗೌಪತ್ಯೆಯನ್ನು ಮತ್ತೆಯೂ ಕಾಪಾಡಬಹುದಿತ್ತು. ಸಾಮಾನ್ಯ ನಾಗರಿಕನಿಗೆ ತೊಂದರೆ ಆಗುತ್ತಿರಲಿಲ್ಲ. ವ್ಯಾಪಾರ ವಹಿವಾಟು ಸ್ಥಗಿತ ಆಗುತ್ತಿರಲಿಲ್ಲ.

ಕಪ್ಪು ಹಣ ಎಂದರೆ ಏನು ? ಕೃಷಿಕನಿಗೆ ಆದಾಯ ತೆರಿಗೆ ಲಾಗು ಆಗುವುದಿಲ್ಲ. ಅವನಲ್ಲಿ ಇರುವ ಹಣ ಕಾಳಧನ ಹೇಗೆ ಆದೀತು ? ಹಾಗೆಯೇ ಟ್ಯಾಕ್ಸ್ ಕೊಟ್ಟವನೂ ಹಣವನ್ನು ಮನೆಯಲ್ಲಿ ಕೂಡಿಟ್ಟಿದ್ದರೆ ಅದು ಕಾಳಧನ ಆಗಲು ಸಾಧ್ಯವಿಲ್ಲ. ಪ್ರಜೆಗಳನ್ನು ಸತಾಯಿಸಿ ಸಂಗ್ರಹಿಸಿದ ತೆರಿಗೆಯ ಸದುಪಯೋಗ ಆದರೆ ಪರವಾಗಿಲ್ಲ. ಆದರೆ ಅದು ದುರುಪಯೋಗವಾಗುವುದು ನಮ್ಮ ಕಣ್ಣ ಮುಂದೆ ಕಾಣುತ್ತದೆ. ಇಂತಹ ದೇಶದಲ್ಲಿ ತಮಗೆ ಬಹುಮತ ಇದೆ ಎಂಬ ಕಾರಣದಿಂದ ಮನಬಂದಂತೆ ತುಘಲಕ್ ದರ್ಬಾರ್ ಮಾಡುವುದನ್ನು ನೋಡಿದರೆ ಈ ದೇಶದಲ್ಲಿ ಹೇಗೆ ಬದುಕುವುದು ಎಂಬ ಚಿಂತೆ ಆಗುತ್ತದೆ.

  • ನಾರಾಯಣ ರಾವ್