ಮಹಾರಾಷ್ಟ್ರ ಪೌರಾಡಳಿತ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಎನ್ನುವುದು ಸರಿಯಲ್ಲ

ಮಹಾರಾಷ್ಟ್ರದ ಪೌರಾಡಳಿತ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ ಎಂದು ಎಲ್ಲಾ ಪೇಡ್ ಮೀಡಿಯಾಗಳು ಅರಚುತ್ತಿವೆ.  ನೋಟು ರದ್ದತಿಯ ಕುರಿತು ಜನಸಾಮಾನ್ಯರಲ್ಲಿ ಹುಟ್ಟಿದ ಸಾರ್ವತ್ರಿಕ ಆಕ್ರೋಶದ ಹೊರತಾಗಿಯೂ ಮಹಾರಾಷ್ಟ್ರ ಪೌರ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ ಎನ್ನುವುದು ಸರಿಯಲ್ಲ. ಕಾರಣ ಅಲ್ಲಿ ಫಲಿತಾಂಶ ಪ್ರಕಟವಾದ 118 ನಗರಸಭೆಗಳಲ್ಲಿ ಬಿಜೆಪಿ ಕೇವಲ 47ರಲ್ಲಿ ಜಯ ಗಳಿಸಿದ್ದರೆ ಬಿಜೆಪಿಗೆ ವಿರುದ್ಧವಾಗಿದ್ದ ಮೂರು ಪಕ್ಷಗಳಾದ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ ಸಿ ಪಿ ಕೂಡಿ ಒಟ್ಟು 71 ನಗರ ಸಭೆಯಲ್ಲಿ ಜಯ ಗಳಿಸಿವೆ.

ವಿಧಾನ ಸಭೆಯಲ್ಲಿ ಶಿವಸೇನೆ ಬಿಜೆಪಿಯ ಪಾರ್ಟ್ನರ್ ಆಗಿತ್ತು, ಪೌರಾಡಳಿತ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ವಿರುದ್ಧವಾಗಿ ಸ್ಪರ್ಧಿಸಿದ್ದವು.  ಅಂದರೆ ವಿರೋಧ ಪಕ್ಷಗಳು 2/3 ಆಂಶ ಸೀಟು ಗೆದ್ದಿದ್ದರೆ ಬಿಜೆಪಿ ಕೇವಲ ಮೂರನೇ ಒಂದಂಶ ಮಾತ್ರ ಗೆದ್ದಿದೆ. ಹಾಗಿರುವಾಗ ಇದು ಬಿಜೆಪಿ ಯ ಜಯಭೇರಿ ಹೇಗಾಗುತ್ತದೆ ?  ಹಿಂದಿನ ಬಾರಿಗೆ ಹೋಲಿಸಿದರೆ ಈ ಬಾರಿ ಬಿಜೆಪಿಯ ಸಾಧನೆ ಗಣನೀಯವಾಗಿ ಉತ್ತಮಗೊಂಡಿರುವುದು ನಿಜ.  ಆದರೆ ಇದರಲ್ಲಿ ಹೆಚ್ಚುಗಾರಿಕೆ ಏನಿಲ್ಲ. ಕಾರಣ ಯಾವುದೇ ರಾಜ್ಯದಲ್ಲೂ ಆಡಳಿತದಲ್ಲಿರುವ ಪಕ್ಷ ಹೆಚ್ಚು ಸ್ಥಾನ ಗೆಲ್ಲುವುದು ಲಾಗಾಯ್ತಿನಿಂದ ನಡೆದು ಬಂದಿದೆ. ಯಾಕೆಂದರೆ ಆಡಳಿತದಲ್ಲಿರುವ ಯಾವುದೇ ಪಕ್ಷವು  ಧನಬಲ, ರಟ್ಟೆಬಲ ಮತ್ತು ಅಧಿಕಾರ ಬಲದಿಂದ ಚುನಾವಣೆಗಳನ್ನು ಗೆಲ್ಲುತ್ತದೆ.

ಆದರೆ ಮಹಾರಾಷ್ಟ್ರದಲ್ಲಿ ಆಗಿರುವುದೇನು?  ಬಿಜೆಪಿ ಮಹಾರಾಷ್ಟ್ರದ ವಿಧಾನ ಸಭೆಯಲ್ಲಿ ಶಿವಸೇನೆ ಮೈತ್ರಿಯೊಂದಿಗೆ ಅಧಿಕಾರದಲ್ಲಿ ಇದ್ದರೂ ಪೌರಾಡಳಿತ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಯಾಕೆ ಇಷ್ಟೊಂದು ದುರ್ಬಲ ಪ್ರದರ್ಶನ ಮಾಡಿದೆ ? ಇದರ ಅರ್ಥ ಜನರು ಬಿಜೆಪಿ ಪಕ್ಷದ ಆಡಳಿತದಿಂದ ಸಂತುಷ್ಟರಾಗಿಲ್ಲ ಎಂದಾಗಿದೆ. ಹೀಗಿದ್ದರೂ ಕೇಸರಿ ಕೃಪಾಪೋಷಿತ ಪತ್ರಿಕೆಗಳು ಮತ್ತು ಟೀವಿ ಚಾನೆಲ್ಲಿನವರು ನೋಟು ರದ್ದತಿಯಿಂದಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಏನೂ ಹಾನಿಯಾಗಿಲ್ಲ ಎಂದು ಬೊಬ್ಬೆ ಹಾಕುತ್ತಿರುವುದು ಆಶ್ಚರ್ಯ.

ಗುಜರಾತಿನ ಪೌರಾಡಳಿತ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದು ಸತ್ಯ. ಒಟ್ಟು 123 ನಗರ ಸಭೆಗಳಲ್ಲಿ ಬಿಜೆಪಿ ಗೆ 106 ಸ್ಥಾನ ಸಿಕ್ಕಿದ್ದು ಕಾಂಗ್ರೆಸ್ಸಿಗೆ ಕೇವಲ 17 ಸ್ಥಾನ ಮಾತ್ರ ಸಿಕ್ಕಿರುವುದು ನಿಜ. ಆದರೆ ಗುಜರಾತಿನಲ್ಲಿ ಆಡಳಿತ ಪಕ್ಷದ ಹಣಬಲ ಧನಬಲ ಮತ್ತು ಅಧಿಕಾರ ಬಲದ ಜತೆಗೆ ಇನ್ನೊಂದು ಅತೀ ಮುಖ್ಯ ವಿಷಯ ಈ ಚುನಾವಣೆಯ ಮೇಲೆ ಪ್ರಭಾವ ಬೀರಿದೆ. ಮಂಗಳೂರಿನ ಗುಜರಾತಿಗಳೇ ಹೇಳುವಂತೆ ಅವರ ಗುಜರಾತ್ ರಾಜ್ಯದ ಜನರಿಗೆ ಆರು ತಿಂಗಳ ಮೊದಲೇ ದೀಪಾವಳಿ ನಂತರ ನೋಟು ನಿಷೇಧವಾಗುವ ಸಂಗತಿ ಮುಂಚಿತವಾಗಿ ಗೊತ್ತಿತ್ತು, ಹಾಗಾಗಿ ಅವರು ದೀಪಾವಳಿಗೆ ಮುಂಚೆಯೇ ತಮ್ಮ ಎಲ್ಲಾ ಹಳೆಯ ನೋಟುಗಳನ್ನು ಚಿನ್ನ ಅಥವಾ ಸ್ಥಿರಾಸ್ತಿಯಾಗಿ ಪರಿವರ್ತಿಸಿ ಬಿಟ್ಟಿದ್ದಾರೆ.  ಹೀಗೆ ಗುಜರಾತಿಗಳಿಗೆ ನೋಟು ರದ್ದತಿಯಿಂದ ಯಾವುದೇ ತೊಂದರೆ ಆಗದಿರುವುದರಿಂದ ಅವರು ಬಿಜೆಪಿ ಪಕ್ಷದ ಬಗ್ಗೆ ವಿಶೇಷತಃ  ಅಮಿತ್ ಶಾಹ ಬಗ್ಗೆ ಭಾರಿ ಅಭಿಮಾನ ಬೆಳೆಸಿಕೊಂಡಿದ್ದಾರೆ. ಈ ಸ್ವಾರ್ಥಭರಿತ ಅಭಿಮಾನ ಬಿಜೆಪಿಯನ್ನು ಭಾರಿ ಅಂತರದಿಂದ ಗೆಲ್ಲಿಸಿದ್ದು ನಿಜ. ಈಗಲಾದರೂ ಅರ್ಥವಾಯಿತೇ ಗುಜರಾತಿನಲ್ಲಿ ಬಿಜೆಪಿ ಜಯಭೇರಿಯ ಗುಟ್ಟು !

  • ಡಿ ಅನಿಲ್ ಕುಮಾರ್ ಪೂಜಾರಿ, ಅಳಕೆ-ಮಂಗಳೂರು