ಹಣಕಾಸು ಬಂಡವಾಳದ ಉರುಳು ಬಿಗಿಯಾಗುತ್ತಿದೆ

ನರೇಂದ್ರ ಮೋದಿ ಸರ್ಕಾರ ಭಾರತದ ಅರ್ಥವ್ಯವಸ್ಥೆಯನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ಪರಭಾರೆ ಮಾಡಲು ಸಿದ್ಧತೆ ನಡೆಸಿದೆ. ಈ ಸಿದ್ಧತೆಯ ಒಂದು ಮಹತ್ತರ ಹೆಜ್ಜೆ ಡಿಜಿಟಲೀಕರಣ-ಅಮಾನ್ಯೀಕರಣ ಮತ್ತು ನಗದು ರಹಿತ ಆರ್ಥಿಕತೆಯ ಸೃಷ್ಟಿ.

  • ನಾ ದಿವಾಕರ

ಕಪ್ಪು ಹಣ ಯಾವ ಸ್ವರೂಪದಲ್ಲಿದೆ ಎಂಬ ಸ್ಪಷ್ಟ ಅರಿವು ಭಾರತದ ಪ್ರಭುತ್ವ ಮತ್ತು ಸರ್ಕಾರಗಳಿಗೆ ಇದೆ. ಕಪ್ಪುಹಣದ ಮೂಲ ವಾರಸುದಾರರು ಯಾರು ಎಂಬ ಮಾಹಿತಿಯೂ ಇದೆ. ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುವ ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸ್ವತಂತ್ರ ಭಾರತದಲ್ಲಿ ಹೇಗೆ ತಮ್ಮ ಅಕ್ರಮ ಸಂಪತ್ತನ್ನು ಸಂರಕ್ಷಿಸಿದ್ದಾರೆ ಎಂಬ ಸ್ಪಷ್ಟ ಮಾಹಿತಿಯೂ ಈ ದೇಶದ ಆಡಳಿತ ವ್ಯವಸ್ಥೆಗೆ ತಿಳಿದಿದೆ. ವಿದೇಶಿ ಬ್ಯಾಂಕುಗಳಲ್ಲಿ ಲಕ್ಷ ಲಕ್ಷ ಕೋಟಿ ರೂ ಅಕ್ರಮ ಸಂಪತ್ತು ಶೇಖರಣೆಯಾಗಿದೆ ಎಂಬ ಮಾಹಿತಿ ಸ್ಫೋಟಗೊಂಡ ಕೂಡಲೇ ಕಾರ್ಯಪ್ರವೃತ್ತರಾದ  ರಾಜಕೀಯ ಹಿತಾಸಕ್ತಿಗಳು ದೇಶದ ಜನಸಾಮಾನ್ಯರಲ್ಲಿ ಒಂದು ಭ್ರಮೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದವು. ದೇಶಭಕ್ತರಿಂದ ಆರಾಧಿಸಲ್ಪಡುವ ಭಾರತಮಾತೆಯ ಒಡಲಲ್ಲೇ ಹುದುಗಿದ್ದ ಬೃಹತ್ ಪ್ರಮಾಣದ ಅಕ್ರಮ ಸಂಪತ್ತನ್ನು ಸುರಕ್ಷಿತವಾಗಿರಿಸಿ ದೂರದ ಬೆಟ್ಟದ ಗುಹೆಗಳಲ್ಲಿದ್ದ ಕಪ್ಪು ಹಣವನ್ನು ಭಾರತಕ್ಕೆ ತರಲು ಸಜ್ಜಾಗಿದ್ದವು. ಇದರ ಪರಿಣಾಮವೇ 2014ರ ಚುನಾವಣೆಯ ನರೇಂದ್ರ ಮೋದಿ ಪ್ರಭಾವಳಿ. ನೂರು ದಿನಗಳಲ್ಲಿ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ತರುತ್ತೇನೆ ಎಂದು ಘೋಷಿಸಿದ ಪ್ರಧಾನಿಗೆ ಸ್ವದೇಶದಲ್ಲೇ ಅಡಗಿದ್ದ ಕಪ್ಪುಹಣದ ಪ್ರಮಾಣದ ಪರಿವೆಯೇ ಇರಲಿಲ್ಲ.

ಕಾರ್ಪೋರೇಟ್ ಔದ್ಯಮಿಕ ಹಿತಾಕಸ್ತಿಗಾಗಿ, ಹಿತಾಸಕ್ತಿಯಿಂದ ಮತ್ತು ಹಿತಾಸಕ್ತಿಯ ರಕ್ಷಣೆಗೋಸ್ಕರ ಚುನಾಯಿತವಾದ ಒಂದು ಸರ್ಕಾರ ವಿದೇಶಿ ಬ್ಯಾಂಕುಗಳಲ್ಲಿರುವ ಅಕ್ರಮ ಸಂಪತ್ತನ್ನು ದೇಶದ ಜನಸಾಮಾನ್ಯರಿಗೆ ಹಂಚಲು ಯತ್ನಿಸುವುದು ಕಾಗಕ್ಕ ಗೂಬಕ್ಕನ ಕಥೆಯಂತೆ ರೋಚಕವಾಗಿರುತ್ತದೆ. ಈ ರೋಚಕತೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ತನ್ನ ಅಮಾನ್ಯೀಕರಣ ನೀತಿಯನ್ನು ಘೋಷಿಸಿದೆ. 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ರದ್ದುಮಾಡುವ ಮೂಲಕ ದೇಶದ ಅರ್ಥವ್ಯವಸ್ಥೆಯಲ್ಲಿ ಚಾಲ್ತಿಯಲ್ಲಿದ್ದ ಶೇ 86ರಷ್ಟು ಹಣವನ್ನು ಹಿಂಪಡೆದಿರುವ ಸರ್ಕಾರ  ಇಂದು ಪ್ರತಿಯೊಬ್ಬ ಪ್ರಜೆಯನ್ನೂ ಕಪ್ಪುಹಣದ ವಾರಸುದಾರನಂತೆ ನೋಡುತ್ತಿದೆ. ಬ್ಯಾಂಕುಗಳ ಮುಂದೆ ತಮ್ಮ ಉಳಿತಾಯದ ಹಣವನ್ನು ವಿನಿಮಯ ಮಾಡಿಕೊಳ್ಳಲು, ಖಾತೆಗೆ ಜಮಾ ಮಾಡಲು, ಹಿಂಪಡೆಯಲು ಹಗಲಿರುಳು ಸಾಲುಗಟ್ಟಿ ನಿಂತಿರುವ ಅಮಾಯಕ ಜನರ ನಿಟ್ಟುಸಿರಿನಲ್ಲಿ ಮೋದಿ ಸರ್ಕಾರ ಕಪ್ಪು ಹಣದ ಛಾಯೆ ಕಾಣುತ್ತಿದೆ.  ನೋಟು ರದ್ದತಿಯಾದ 50 ದಿನಗಗಳೊಳಗಾಗಿ ದೇಶದಲ್ಲಿನ ಕಪ್ಪುಹಣದ ಪತ್ತೆಯಾಗುತ್ತದೆ ಎಂಬ ಭ್ರಮೆ ಹುಸಿಯಾಗುತ್ತಿರುವಂತೆಯೇ ತಮ್ಮ ಧೋರಣೆ ಬದಲಿಸುತ್ತಿರುವ ಮೋದಿ ಸರ್ಕಾರ ಈ ಕಪ್ಪುಹಣವನ್ನು ಬದಿಗೊತ್ತಿ ಡಿಜಿಟಲೀಕರಣ ಮತ್ತು ನಗದು ರಹಿತ ಆರ್ಥಿಕತೆಯ ಬಗ್ಗೆ ಮಾತನಾಡುತ್ತಿದೆ.

ಮೂಲತಃ ಅಮಾನ್ಯೀಕರಣ ಮತ್ತು ಡಿಜಿಟಲೀಕರಣ ನೀತಿ ನವ ಉದಾರವಾದ ಮತ್ತು ಜಾಗತೀಕರಣ ಪ್ರಕ್ರಿಯೆಯ ಅತ್ಯುನ್ನತ ಹಂತದ ವಿದ್ಯಮಾನಗಳು. ಬಂಡವಾಳ ಕ್ರೋಢೀಕರಣ ಪ್ರಕ್ರಿಯೆಯಲ್ಲಿ ಉತ್ಪಾದಕೀಯ ಶಕ್ತಿಗಳ ಶ್ರಮದ ಫಲವನ್ನು ಆಡಳಿತ ವ್ಯವಸ್ಥೆ ತನ್ನ ಕಬಂಧ ಬಾಹುಗಳಲ್ಲಿ ಬಂಧಿಸುವ ವಿಕೃತ ಬಂಡವಾಳ ವ್ಯವಸ್ಥೆಯನ್ನು ನಾವಿಂದು ಕಾಣುತ್ತಿದ್ದೇವೆ. ಸರಳವಾಗಿ ಹೇಳುವುದಾದರೆ ಅಮಾನ್ಯೀಕರಣ ನೀತಿಯನ್ನು ಹೀಗೆ ಬಣ್ಣಿಸಬಹುದು :

“ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ಎಲ್ಲ ನಗದು ವಹಿವಾಟುಗಳನ್ನು ಬ್ಯಾಂಕ್ ಮೂಲಕವೇ ನಡೆಸುತ್ತಾನೆ. ಸರ್ಕಾರ ತನ್ನ ಕೃತಕ ಔದಾರ್ಯದ ನೆಲೆಯಲ್ಲಿ ಶ್ರಮಿಕ ಜನತೆಗೆ ಮತ್ತು ಮಧ್ಯಮ ವರ್ಗಗಳಿಗೆ ನೀಡುವ ಎಲ್ಲ ಹಣಕಾಸಿನ ನೆರವು ಬ್ಯಾಂಕ್ ಖಾತೆಯ ಮೂಲಕವೇ ಒದಗಿಬರುತ್ತದೆ. ಜನಧನ್ ಈ ಪ್ರಕ್ರಿಯೆಯ ಒಂದು ಭಾಗ. ಬ್ಯಾಂಕ್ ಖಾತೆಯಲ್ಲಿ ಜಮಾಗೊಂಡ ತನ್ನ ಶ್ರಮದ ಫಲ ಪಡೆಯಲು ಜನತೆ ನಗದು ವಹಿವಾಟು ನಡೆಸುವಂತಿಲ್ಲ. ಡಿಜಿಟಲೀಕರಣದ ಮೂಲಕ ಎಲ್ಲ ವ್ಯವಹಾರಗಳು ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ನಗದುರಹಿತ ಅರ್ಥವ್ಯವಸ್ಥೆಯ ಪರಿಣಾಮವಾಗಿ ಸಮಸ್ತ ಆರ್ಥಿಕ ವಹಿವಾಟುಗಳೂ ಸಹ ಆಧಾರ್ ಕಾರ್ಡ್ ಮೂಲಕ, ಆದಾಯ ತೆರಿಗೆ ಇಲಾಖೆಯ ಪಾನ್ ಕಾರ್ಡ್ ಮೂಲಕ ನಡೆಯುತ್ತದೆ. ಅರ್ಥಾತ್ ಪ್ರತಿಯೊಬ್ಬ ಪ್ರಜೆಯ ದಿನನಿತ್ಯದ ವ್ಯವಹಾರಗಳನ್ನು ಪ್ರಭುತ್ವ ಗಮನಿಸುತ್ತದೆ, ನಿಯಂತ್ರಿಸುತ್ತದೆ ಮತ್ತು ನಿರ್ದೇಶಿಸುತ್ತದೆ. ಅರ್ಥವ್ಯವಸ್ಥೆಯಲ್ಲಿ, ಮಾರುಕಟ್ಟೆಯಲ್ಲಿ ನಗದು ವಹಿವಾಟು ಕ್ರಮೇಣ ಇಲ್ಲವಾದಾಗ ದೇಶದ ಇಡೀ ಬಂಡವಾಳದ ಹರಿವು ಕೇವಲ ಬ್ಯಾಂಕಿಂಗ್ ವಾಹಿನಿಗಳ ಮೂಲಕ, ತಂತ್ರಜ್ಞಾನದ ಮುಖಾಂತರ ನಡೆಯುತ್ತದೆ. ತಮ್ಮ ಅನರ್ಥ ಕ್ರಾಂತಿಯ ಎರಡನೆಯ ಭಾಗದಲ್ಲಿ ನರೇಂದ್ರ ಮೋದಿ ಈ ಕ್ರೋಢೀಕೃತ ಬಂಡವಾಳವನ್ನು ನಿಯಂತ್ರಿಸುವ ಅಧಿಕಾರವನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ನೀಡಲು ಮುಂದಾಗುತ್ತಾರೆ. ಸಾರ್ವಜನಿಕ ಬ್ಯಾಂಕುಗಳ ವಿಲೀನ ಮತ್ತು ಖಾಸಗೀಕರಣ ಈ ನಿಟ್ಟಿನಲ್ಲಿ ಒಂದು ಮಹತ್ತರ ಹೆಜ್ಜೆಯಾಗುತ್ತದೆ. ನವ ಉದಾರವಾದದ ಪೂಜಾರಿಗಳು ಇದನ್ನು `ಕ್ರಾಂತಿಕಾರಿ’ ಎಂದು ಬಣ್ಣಿಸುತ್ತಾರೆ. ಆದರೆ ಇದು ಜನಸಾಮಾನ್ಯರ ದೃಷ್ಟಿಯಲ್ಲಿ ಪ್ರತಿಕ್ರಾಂತಿಯಾಗಿರುತ್ತದೆ. ದೇಶದ ಸಮಸ್ತ ಆರ್ಥಿಕ ಸಂಪನ್ಮೂಲಗಳು ಮತ್ತು 120 ಕೋಟಿ ಜನರ ನಿತ್ಯ ಜೀವನದ ವಹಿವಾಟುಗಳನ್ನು ನಿಯಂತ್ರಿಸುವ ಡಿಜಿಟಲ್ ಯುಗದ ಸಾಮ್ರಾಟರು ಬಂಡವಾಳದ ಒಡೆಯರಾಗುತ್ತಾರೆ. ಆಗ ಜಾಗತಿಕ ಹಣಕಾಸು ಬಂಡವಾಳ ತನ್ನ ಸಂಪೂರ್ಣ ಹಿಡಿತ ಸಾಧಿಸಲು ಸುಲಭವಾಗುತ್ತದೆ.”

ನೋಟು ರದ್ಧತಿಯ ಮೂಲ ಉದ್ದೇಶ ಕಪ್ಪುಹಣವನ್ನು ನಿಯಂತ್ರಿಸುವುದೂ ಅಲ್ಲ ಅಥವಾ ದೇಶದ ಶ್ರೀಮಂತಿಕೆಯ ಒಡಲಲ್ಲಿ ಹುದುಗಿರುವ ಅಕ್ರಮ ಸಂಪತ್ತನ್ನು ಹೊರಗೆಳೆಯುವುದೂ ಅಲ್ಲ. ಬದಲಾಗಿ ಭಾರತದ ಜನಸಾಮಾನ್ಯರನ್ನು ತಂತ್ರಜ್ಞಾನ ಆಧಾರಿತ ಬ್ಯಾಂಕಿಂಗ್ ವ್ಯವಸ್ಥೆಗೆ ಸಜ್ಜಾಗಿಸುವುದೇ ಆಗಿದೆ. ತನ್ಮೂಲಕ ನರೇಂದ್ರ ಮೋದಿ ಸರ್ಕಾರ ಭಾರತದ ಅರ್ಥವ್ಯವಸ್ಥೆಯನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ಪರಭಾರೆ ಮಾಡಲು ಸಿದ್ಧತೆ ನಡೆಸಿದೆ. ಈ ಸಿದ್ಧತೆಯ ಒಂದು ಮಹತ್ತರ ಹೆಜ್ಜೆ ಡಿಜಿಟಲೀಕರಣ-ಅಮಾನ್ಯೀಕರಣ ಮತ್ತು ನಗದು ರಹಿತ ಆರ್ಥಿಕತೆಯ ಸೃಷ್ಟಿ. ಕಪ್ಪು ಹಣ ಎಂದರೇನು ಎಂಬ ಪ್ರಶ್ನೆ ಉದ್ಭವಿಸಿದಾಗ ಪ್ರಭುತ್ವದ ವ್ಯಾಖ್ಯಾನಕ್ಕೂ ಜನಸಾಮಾನ್ಯರ ವ್ಯಾಖ್ಯಾನಕ್ಕೂ ಅಪಾರ ಅಂತರ ಇರುವುದು ಸಹಜ. ಆದರೆ ಭಾರತದ ಮಾಧ್ಯಮಗಳು ಮತ್ತು ಚಿಂತಕರು ಈ ಪ್ರಶ್ನೆಗೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ. ಶ್ರಮಜೀವಿಗಳ ದೃಷ್ಟಿಯಲ್ಲಿ ಕಪ್ಪು ಹಣ ಎಂದರೇನು ಎಂಬ ಪ್ರಶ್ನೆ ಸಾರ್ವಜನಿಕ ಚರ್ಚೆಗೊಳಗಾದಲ್ಲಿ ಬಹುಶಃ ಮೋದಿ ಸರ್ಕಾರದ ನಗದುರಹಿತ ಅರ್ಥವ್ಯವಸ್ಥೆಯ ಗುಪ್ತ ಕಾರ್ಯಸೂಚಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ.

1991ರಲ್ಲಿ ಜಾಗತೀಕರಣಕ್ಕೆ ರತ್ನಗಂಬಳಿ ಹಾಸಿ ಮುಕ್ತ ಮಾರುಕಟ್ಟೆಯನ್ನು ಹಠಾತ್ತನೆ ಅಪ್ಪಿಕೊಂಡಂತೆಯೇ ನರೇಂದ್ರ ಮೋದಿ ಡಿಜಿಟಲೀಕರಣ ಪ್ರಕ್ರಿಯೆಯ ಮೂಲಕ ಜಾಗತಿಕ ಹಣಕಾಸು ಬಂಡವಾಳಕ್ಕೆ ಪೂರ್ಣಕುಂಭ ಸ್ವಾಗತ ನೀಡುತ್ತಿದ್ದಾರೆ. ಡಿಜಿಟಲೀಕರಣದ ಹಿಂದೆ ಜಾಗತಿಕ ಕಾರ್ಪೋರೇಟ್ ಹಿತಾಸಕ್ತಿಗಳನ್ನು ಪೋಷಿಸುವ ಹುನ್ನಾರ ಇರುವುದನ್ನು ನಿರ್ಲಕ್ಷಿಸಲಾಗುವುದಿಲ್ಲ ಈ ಹಿತಾಸಕ್ತಿಗಳನ್ನು ನಿಯಂತ್ರಿಸುತ್ತಿರುವ ಜಾಗತಿಕ ಬಂಡವಾಳ ವ್ಯವಸ್ಥೆ ಭಾರತದ ಆಳುವ ವರ್ಗಗಳ ಮೂಲಕವೇ ತಮ್ಮ ಧ್ಯೇಯ ಸಾಧಿಸಲು ಯತ್ನಿಸುತ್ತಿರುವುದು ಸುಸ್ಪಷ್ಟ.  ಮೋದಿಯ ಡಿಜಿಟಲೀಕರಣ ಯೋಜನೆಯ ಭಾಗಶಃ ಯಶಸ್ವಿಯಾದರೂ ಸಹ ಮುಂದಿನ ಐದು ವರ್ಷಗಳಲ್ಲಿ ಡಿಜಿಟಲ್ ವಹಿವಾಟು ಉದ್ಯಮಗಳಿಗೆ 500 ಶತಕೋಟಿ ಡಾಲಡಿuಗಳಷ್ಟು ಲಾಭವಾಗುತ್ತದೆ ಎಂದು ಬೋಸ್ಟನ್ ಸಲಹಾ ಸಮಿತಿಯ ಸಂಶೋಧನೆಯೊಂದು ಹೇಳಿದೆ. ಆದರೆ ಈ ಸಾಧನೆಗಾಗಿ ಭಾರತದ ಬಹುಪಾಲು ಪ್ರಜೆಗಳು ನಗದು ವ್ಯವಹಾರವನ್ನು ತೊರೆದು ತಂತ್ರಜ್ಞಾನ ಆಧಾರಿತ ವಹಿವಾಟು ನಡೆಸಲು ಸಜ್ಜಾಗಬೇಕಾಗುತ್ತದೆ. ಅಮಾನ್ಯೀಕರಣ ಈ ವಿಕೃತ ನೀತಿಗೆ ಒಂದು ವಾಮ ಮಾರ್ಗವಷ್ಟೆ.