ಸಾಂತ್ವನ ಹೇಳುವವರಿಲ್ಲದ ಬ್ಯಾಂಕ್ ನೌಕರರ ಬವಣೆ

* ಅನೂಪ್ ರಾಯ್ ಮತ್ತು ಅಭಿಜಿತ್ ಲೆಲೆ
……………….
ನೋಟು ಅಮಾನ್ಯೀಕರಣದ ನಂತರ ಸೃಷ್ಟಿಯಾಗಿರುವ ಪ್ರಕ್ಷುಬ್ಧ ವಾತಾವರಣ ಮತ್ತು ಆತಂಕಭರಿತ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ದೇಶದ ಬ್ಯಾಂಕ್ ನೌಕರರು ತಮ್ಮ ಬ್ಯಾಂಕ್ ವತಿಯಿಂದ ಅವಶ್ಯಕತೆಗನುಗುಣವಾಗಿ ಹಣವನ್ನೂ ಪಡೆಯಲಾಗದೆ, ಗ್ರಾಹಕರಿಗೆ ಸಮರ್ಥವಾಗಿ ಸೇವೆ ಸಲ್ಲಿಸಲೂ ಆಗದೆ ಪರದಾಡುತ್ತಿರುವ ಸಂದರ್ಭದಲ್ಲಿ ಬ್ಯಾಂಕ್ ಆಡಳಿತ ಮಂಡಲಿಯಿಂದ ನೌಕರರಿಗೆ ಯಾವುದೇ ರೀತಿಯ ಪ್ರೋತ್ಸಾಹಕರ ಧೋರಣೆ ವ್ಯಕ್ತವಾಗದಿರುವುದು ನಿಜಕ್ಕೂ ಖಂಡನಾರ್ಹ. ಕಳೆದ ನಲವತ್ತು ದಿನಗಳಲ್ಲಿ ರಜೆ ಪಡೆಯದೆ ಕೆಲಸ ಮಾಡುತ್ತಿರುವ ಬ್ಯಾಂಕ್ ನೌಕರರು ಗ್ರಾಹಕರಿಗೆ ಪರಿಸ್ಥಿತಿಯನ್ನು ಮನದಟ್ಟು ಮಾಡುವಲ್ಲಿಯೇ ಬಸವಳಿದಿದ್ದಾರೆ.
ಹಳೆಯ ನೊಟುಗಳನ್ನು ಸ್ವೀಕರಿಸುವುದು ಮತ್ತು ಸಮರ್ಥವಾಗಿ ಲೆಕ್ಕ ಪತ್ರಗಳನ್ನು ದಾಖಲಿಸುವ ಬ್ಯಾಂಕ್ ಉದ್ಯೋಗಿಗಳ ಕೆಲಸದ ಬಗ್ಗೆ ತೀವ್ರ ಗಮನ ನೀಡಲಾಗುತ್ತಿದೆ. ಬ್ಯಾಂಕಿನ ಆಂತರಿಕ ಲೆಕ್ಕ ಪರಿಶೋಧಕರು ಎಲ್ಲ ಖಾತೆ ಮತ್ತು ವಹಿವಾಟುಗಳನ್ನು ಪರಿಶೀಲಿಸುತ್ತಿದ್ದು ನಂತರ ಆರ್ ಬಿ ಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕೆಲವೊಮ್ಮೆ ಬ್ಯಾಂಕುಗಳ ಲೆಕ್ಕಪತ್ರಗಳನ್ನು, ದಾಖಲೆಗಳನ್ನು ಪರಿಶೀಲಿಸಲು ತನಿಖಾಧಿಕಾರಿಗಳೂ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅಸಹಾಯಕರಾಗಿರುವ ಬ್ಯಾಂಕ್ ನೌಕರರಿಗೆ ಆಡಳಿತ ಮಂಡಲಿ ಕೊಂಚ ಸಮಾಧಾನಕರ ಸಾಂತ್ವನವನ್ನಾದರೂ ಹೇಳಬಹುದಿತ್ತು. ಆದರೆ ಹಾಗಾಗುತ್ತಿಲ್ಲ. ಬದಲಾಗಿ ಯಾವುದೇ ಪ್ರಮಾದವಾದರೂ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗುತ್ತಿದೆ.
ಆಕ್ಸಿಸ್ ಬ್ಯಾಂಕ್‍ನ ಹೆಸರು ಪ್ರತಿನಿತ್ಯ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಇತರ ಖಾಸಗಿ ಬ್ಯಾಂಕುಗಳ ನೌಕರರೂ ಸಹ ಪರಿಶೀಲನೆಗೊಳಗಾಗಿದ್ದಾರೆ. ಬಹುತೇಕ ಬ್ಯಾಂಕ್ ನೌಕರರು ಯುವಕರೇ ಆಗಿದ್ದು ಕೆಲವೇ ವರ್ಷಗಳ ಸೇವೆ ಸಲ್ಲಿಸಿದವರಾಗಿದ್ದಾರೆ. ಬ್ಯಾಂಕ್ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡುವುದು ಈ ನೌಕರರ ಮುಖ್ಯ ಕರ್ತವ್ಯವಾಗಿರುತ್ತದೆ. ಕ್ಯಾಷ್ ಮತ್ತು ಇತರ ಕೌಂಟರುಗಳಲ್ಲಿ ಕೆಲಸ ನಿರ್ವಹಿಸುವ ಅನುಭವಿ ಬ್ಯಾಂಕ್ ನೌಕರರು ಬ್ಯಾಂಕಿನ ಪ್ರಗತಿಗಿಂತಲೂ ನಿಯಮ ಮತ್ತು ಕಾಯ್ದೆಗಳಿಗೇ ಪ್ರಾಧಾನ್ಯತೆ ನೀಡುತ್ತಾರೆ. ಅನನುಭವಿ ಯುವ ನೌಕರರು ರಾತ್ರಿಯಿಡೀ ಬ್ಯಾಂಕ್ ಕೆಲಸದಲ್ಲಿ ಮುಳುಗಿರುತ್ತಾರೆ. ಏತನ್ಮಧ್ಯೆ ಬ್ಯಾಂಕುಗಳ ನಿಯತಕಾಲಿಕ ಕೆಲಸಗಳೆಲ್ಲವೂ ನೆನೆಗುದಿಗೆ ಬಿದ್ದಿವೆ.
ಸಾರ್ವಜನಿಕ ಬ್ಯಾಂಕುಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಸಿಬ್ಬಂದಿ ಕೊರತೆಯ ಹೊರತಾಗಿಯೂ ನೌಕರರು ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಬ್ಯಾಂಕ್ ಆಡಳಿತ ಮಂಡಲಿಗಳಿಂದ ನೌಕರರಿಗೆ ಯಾವುದೇ ಉತ್ತೇಜನಕಾರಿ ಪ್ರೋತ್ಸಾಹ ದೊರೆಯುತ್ತಿಲ್ಲ ; ಬದಲಾಗಿ ಎಚ್ಚರಿಕೆಯ ಮಾತುಗಳೇ ಹೆಚ್ಚಾಗಿವೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಾರೆ.
ನೂರು ರೂ ನೋಟುಗಳು ಬ್ಯಾಂಕಿಗೆ ಹಿಂದಿರುಗುತ್ತಿಲ್ಲವಾದ ಕಾರಣ ಕೆಲಸ ನಿರ್ವಹಿಸುತ್ತಿರುವ ಕೆಲವೇ ಎಟಿಎಂಗಳು ಕೇವಲ 2000 ರೂ ನೋಟುಗಳನ್ನು ಮಾತ್ರ ನೀಡುತ್ತಿವೆ. ಇದು ಬ್ಯಾಂಕ್ ಸಿಬ್ಬಂದಿಯನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿದೆ. ಆರಂಭದ ದಿನಗಳಲ್ಲಿ ಹೆಚ್ಚಿನ ಕೆಲಸ ಮಾಡಿದ್ದಕ್ಕಾಗಿ ಬ್ಯಾಂಕ್ ನೌಕರರಿಗೆ ಓವರ್ ಟೈಂ ವೇತನ ನೀಡಲಾಗಿತ್ತು. ಈಗ ಕೆಲಸದ ಒತ್ತಡವೂ ಕಡಿಮೆಯಾಗಿದ್ದು (ನೋಟು ಅಮಾನ್ಯೀಕರಣದಿಂದಾದ ಪರಿಸ್ಥಿತಿ ಬಿಟ್ಟು) ಓವರ್ ಟೈಂ ವೇತನವೂ ಇಲ್ಲವಾಗಿದೆ. ಶೇ 85ರಷ್ಟು ಬ್ಯಾಂಕ್ ನೌಕರರು ಈ ಕೆಲಸದಲ್ಲಿ ನಿರತರಾಗಿರುವುದರಿಂದ ಇಷ್ಟೊಂದು ನೌಕರರಿಗೆ ಓವರ್‍ಟೈಂ ನೀಡುವುದು ಕಷ್ಟವಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿ ವರ್ಗ ಹೇಳುತ್ತದೆ. ಗ್ರಾಹಕರ ಪ್ರತಿರೋಧ ಮತ್ತು ನಗದು ಸರಬರಾಜಿನ ಕೊರತೆ ಮತ್ತು ಅನಿಶ್ಚಿತತೆಯಿಮದ ಗ್ರಾಹಕರೊಡನೆ ಸಂವಾದ ನಡೆಸುವ ಹಂತದಲ್ಲಿ ಬ್ಯಾಂಕ್ ನೌಕರರು ತೀವ್ರ ಒತ್ತಡಕ್ಕೊಳಗಾಗಿದ್ದು, ಒಮ್ಮೆ ಸರ್ಕಾರ ನಗದು ಪೂರೈಕೆಯನ್ನು ಸುಗಮಗೊಳಿಸಿದರೆ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಬ್ಯಾಂಕ್ ಆಡಲಿತ ಮಂಡಲಿಗಳು ಹೇಳುತ್ತಿವೆ.
ತೀವ್ರ ಕೆಲಸದ ಒತ್ತಡದಿಂದ ಬ್ಯಾಂಕ್ ನೌಕರರ ಆರೋಗ್ಯದಲ್ಲೂ ಏರುಪೇರು ಉಂಟಾಗಿದ್ದು ಹೆಚ್ಚಿನ ಗಂಟೆಗಳ ಕೆಲಸ, ದೀರ್ಘ ಕಾಲದ ಒತ್ತಡ ಮತ್ತು ಪ್ರಕ್ಷುಬ್ಧ ವಾತಾವರಣದ ಪರಿಣಾಮ ಬ್ಯಾಂಕ್ ನೌಕರರು ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಹಕರೊಡನೆ ನೇರ ಸಂಪರ್ಕ ಇರುವ ಬ್ಯಾಂಕ್ ಸಿಬ್ಬಂದಿಯಂತೆಯೇ ಇತರ ಕೆಲಸಗಳಲ್ಲಿ ತೊಡಗಿರುವವರೂ ಸಹ ಒತ್ತಕ್ಕೊಳಗಾಗಿದ್ದಾರೆ. ಕೆಲವು ಸಹಕಾರಿ ಬ್ಯಾಂಕುಗಳು ಸಾರ್ವಜನಿಕ ಬ್ಯಾಂಕುಗಳಲ್ಲಿ ತಮ್ಮ ಖಾತೆ ಹೊಂದಿರುವುದರಿಂದ ಪಾವತಿಯಾದ ನಗದು ಎರಡು ಕಡೆ ನಮೂದಿಸಲಾಗಿರಬಹುದು ಎಂಬ ಅನುಮಾನವನ್ನು ಆರ್ ಬಿ ಐ ವ್ಯಕ್ತಪಡಿಸಿದ್ದು ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಕೆಲವು ಸಣ್ಣ ಬ್ಯಾಂಕುಗಳೂ ಸಹ ದೊಡ್ಡ ಬ್ಯಾಂಕುಗಳಲ್ಲಿ ತಮ್ಮ ಖಾತೆ ಹೊಂದಿರುತ್ತವೆ. ಸ್ಟೇಟ್ ಬ್ಯಾಂಕಲ್ಲಿ ಇಪ್ಪತ್ತಕ್ಕೂ ಹೆಚ್ಚು ಸಹಕಾರಿ ಬ್ಯಾಂಕುಗಳು ತಮ್ಮ ಖಾತೆಗಳಿಗೆ ಹಣ ಜಮಾ ಮಾಡುತ್ತವೆ. ದಿನದ ಕೊನೆಯಲ್ಲಿ ಎಸ್ ಬಿ ಐ ತನ್ನ ಒಟ್ಟು ಸಂಗ್ರಹಣ ಮತ್ತು ಟ್ರೆಷರಿ ಹಣದ ಮೊತ್ತವನ್ನು ರಿಸರ್ವ್ ಬ್ಯಾಂಕಿಗೆ ತಿಳಿಸುತ್ತದೆ. ಇದೇ ವೇಳೆ ಸಹಕಾರಿ ಬ್ಯಾಂಕುಗಳೂ ಸಹ ತಮ್ಮ ಬಳಿ ಇರುವ ನಗದು ಮೊತ್ತದ ಅಂಕಿಅಂಶಗಳನ್ನು ಆರ್‍ಬಿಐಗೆ ಕಳುಹಿಸುತ್ತವೆ. ಈ ತಾರತಮ್ಯವನ್ನು ಸರಿದೂಗಿಸಲು ಆರ್‍ಬಿಐ ಬ್ಯಾಂಕುಗಳಿಂದ ಪ್ರತ್ಯೇಕ ಅಂಕಿಅಂಶಗಳನ್ನು ಕೋರಿದ್ದು ಇದರಿಂದ ಮತ್ತೊಮ್ಮೆ ಬ್ಯಾಂಕ್ ಉದ್ಯೋಗಿಗಳ ಕೆಲಸದೊತ್ತಡ ಹೆಚ್ಚಾಗಿದೆ.