ಬೀದಿಬದಿ ವ್ಯಾಪಾರಿ ವಲಯದ ಅವಕಾಶ ಬಳಕೆಗೆ ಬರುವವರಿಲ್ಲ

ಮಂಗಳೂರು : ಕೆಲವೇ ದಿನಗಳ ಹಿಂದೆ ಉದ್ಘಾಟನೆಗೊಂಡ ಬೀದಿ ಬದಿ ವ್ಯಾಪಾರಸ್ಥರ ವಲಯಕ್ಕೆ ಗಿರಾಕಿಗಳ್ಯಾರೂ ಬರುತ್ತಿಲ್ಲ ಎಂದು ಬೀದಿಬದಿ ವ್ಯಾಪಾರಿಗಳಿಂದಲೇ ಅಪಸ್ವರ ಕೇಳಿ ಬಂದಿದೆ.

ನಗರದ ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲವಾಗಬೇಕೆಂಬ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಂಗಳೂರಿನ ಪುರಭವನದ ಹಿಂಭಾಗದಲ್ಲಿ ಖಾಲಿ ಇದ್ದ ಸ್ಥಳದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆಂದೇ ಪ್ರತ್ಯೇಕ ವಲಯವನ್ನು ರೂಪಿಸಲಾಗಿದೆ. ಇಲ್ಲಿ ಇಂಟರ್‍ಲಾಕ್ ಅಳವಡಿಸಿ, ಅದಕ್ಕೆ ಪ್ರತ್ಯೇಕ ಗೇಟ್ ಇರಿಸಿ, ಪ್ರತ್ಯೇಕ ವ್ಯವಸ್ಥೆಯನ್ನೂ ಕಲ್ಪಿಸಿಕೊಡಲಾಗಿದೆ.  ಆದರೆ ಈ ವಲಯಕ್ಕೆ ಯಾವ ವ್ಯಾಪಾರಿಯೂ ಬರಲು ಕೇಳುತ್ತಿಲ್ಲ. ಹೀಗಾಗಿ ಪಾಲಿಕೆ ಈ ಯೋಜನೆ ಬಹುತೇಕ ವಿಫಲವಾಗುವ ಸಾದ್ಯತೆಯೇ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಇಲ್ಲಿ ಸ್ಥಳೀಯ ವ್ಯಾಪಾರಿಗಳಿಗೆ ಅವಕಾಶ ನೀಡದೇ ಹೊರರಾಜ್ಯದ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ. ಯಾರು ಬೀದಿ ಬದಿಯಲ್ಲಿ ವ್ಯಾಪಾರ ಮಾಡುವುದಿಲ್ಲವೋ ಅವರಿಗೆ ಹೊಸದಾಗಿ ಪರ್ಮಿಟ್ ಕೊಡಲಾಗುತ್ತಿದೆ. ಇದು ಸರಿಯಲ್ಲ. ಸುಮಾರು 400ರಷ್ಟು ಬೀದಿ ಬದಿ ವ್ಯಾಪಾರಿಗಳು ಇದ್ದರೂ ಇಲ್ಲಿ ಐಡಿ ಕಾರ್ಡು ಪಡೆದಿರುವುದು ಕೇವಲ 150 ಮಂದಿ ಮಾತ್ರ.

ದಕ್ಷಿಣ ಕನ್ನಡ ಜಿಲ್ಲೆಯ ಬಡ, ನಿರ್ಗತಿಕ ಬೀದಿ ಬದಿ ವ್ಯಾಪಾರಿಗಳಿಗೆ ಮನಪಾ ಮೊದಲು ಆದ್ಯತೆ ನೀಡಬೇಕು, ಅವೈಜ್ಞಾನಿಕವಾಗಿ ವಿತರಿಸಿದ ಕಾರ್ಡುಗಳನ್ನು ರದ್ದುಪಡಿಸಬೇಕು, ವ್ಯಾಪಾರಸ್ಥರಿಗೆ ಪೂರ್ಣಪ್ರಮಾಣದ ಭಧ್ರತೆ ನೀಡಬೇಕೆಂದು ಬೀದಿಬದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ರಿಯಾಝ್ ಹರೇಕಳ ಒತ್ತಾಯಿಸಿದ್ದಾರೆ.