ಕಾಂಗ್ರೆಸ್ಸಿನಿಂದ ನನ್ನ ಉಚ್ಛಾಟನೆ ಸಾಧ್ಯವಿಲ್ಲ

ಪೂಜಾರಿ ಸವಾಲನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಪಕ್ಷದಿಂದ ಉಚ್ಛಾಟನೆ ಮಾಡುವ ಬಗ್ಗೆ ನನಗೆ ಯಾವುದೇ ನೋಟಿಸ್ ಬಂದಿಲ್ಲ. ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ರಕ್ತದಲ್ಲೇ ಕಾಂಗ್ರೆಸ್ ಇದೆ. ಪೂಜಾರಿ ರಕ್ತದಿಂದ ಕಾಂಗ್ರೆಸ್ ಬೇರ್ಪಡಿಸಲು ಸಾಧ್ಯವಿಲ್ಲ. ನನ್ನ ತಂದೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಅವರ ಮಾರ್ಗದಲ್ಲಿ ಮುನ್ನಡೆದವನು ನಾನು. ನೆಹರೂ ಕುಟುಂಬಕ್ಕೆ ಜೀವಕೊಡಲೂ ನಾನು ಸಿದ್ಧ” ಹೀಗೆಂದು ತಮ್ಮ ಆಕ್ರೋಶ ಹೊರಹಾಕಿದವರು ಕೇಂದ್ರದ ಮಾಜಿ ವಿತ್ತ ಸಚಿವ ಬಿ ಜನಾರ್ದನ ಪೂಜಾರಿ.

ಪಕ್ಷ ವಿರೋಧಿ ಚಟುವಟಿಕೆಗೆ ಪೂಜಾರಿಗೆ ಉಚ್ಛಾಟನೆ ನೋಟಿಸ್ ನೀಡಲಾಗಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಜನಾರ್ದನ ಪೂಜಾರಿ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದರು.

“ನಾನೆಂದೂ ಪಕ್ಷವಿರೋಧಿ ಚಟುವಟಿಕೆ ಮಾಡಿಲ್ಲ. ನೆಹರೂ ಕಾಲದಿಂದ ಪೂಜಾರಿ ಕುಟುಂಬ ಕಾಂಗ್ರೆಸ್ಸಿನಲ್ಲಿ ನಿಷ್ಠೆಯನ್ನು ಬೆಳೆಸಿಕೊಂಡು ಬಂದಿದೆ. ನೆಹರೂ ಕುಟುಂಬ ನನ್ನ ಪ್ರಾಣ. ಪಕ್ಷದಿಂದ ನನ್ನನ್ನು ಉಚ್ಛಾಟಿಸುವುದಿದ್ದರೆ ಈಗಿಂದೀಗಲೇ ಉಚ್ಛಾಸಲಿ. ಈ ಕ್ಷಣದಿಂದ ನನ್ನ ಹೋರಾಟ ಆರಂಭವಾಗುತ್ತಿದೆ. ಸತ್ಯವನ್ನೂ ಹೇಳುವುದು ಪಕ್ಷವಿರೋಧಿ ಕೆಲಸವೇ ? ಈ ಪೂಜಾರಿ ಎಂದೂ ತಪ್ಪಿ ಮಾತನಾಡಲ್ಲ” ಎಂದು ಗುಡುಗಿದರು.

“ಪಕ್ಷದಲ್ಲಿ ಮಾತನಾಡಲು ವೇದಿಕೆ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ಪಕ್ಷದಲ್ಲಿ ಮಾತನಾಡುವ ಸ್ಥಿತಿಯೇ ಇಲ್ಲ. ಪರಿಸ್ಥಿತಿ ಈ ರೀತಿ ಇದ್ದರೆ ನಾನೇನು ಮಾಡಲಿ. ರಾಹುಲ್ ಗಾಂಧಿ ಗುಜರಾತ್ ರ್ಯಾಲಿ ಕಂಡು, ಅಲ್ಲಿ ಸೇರಿದ್ದ ಲಕ್ಷಾಂತರ ಜನರನ್ನು ಕಂಡು ಮೋದಿ ಕಂಗಾಲಾಗಿದ್ದಾರೆ. ಮೋದಿ ಬಲೂನು ಬ್ಲಾಸ್ಟ್ ಆಗಿದೆ. ಇಲ್ಲಿ ಸೇರಿರುವ ಜನರನ್ನು ಕಂಡಾಗ ನೋಟು ನಿಷೇಧದಿಂದ ಜನ ಮೋದಿ ವಿರುದ್ಧ ನಿಂತಿದ್ದಾರೆ ಅನ್ನೋದು ಸ್ಪಷ್ಟವಾಗಿದೆ” ಎಂದರು.


 

ಐವನಗೆ ಟಾಂಗ್

ಐವನ್ ಡಿಸೋಜಾ ಹೆಸರು ಹೇಳಲು ಇಚ್ಚಿಸದೇ ಮಾತನಾಡಿದ ಪೂಜಾರಿ, “ಕರಾವಳಿಯ ನಾಯಕನೊಬ್ಬ ಮುಖ್ಯಮಂತ್ರಿಯ ಹಾದಿ ತಪ್ಪಿಸುತ್ತಿದ್ದಾನೆ. ಕುದ್ರೋಳಿ ಕ್ಷೇತ್ರಕ್ಕೆ ಬರುವವರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅವರ ಮನೆಗೆ ಕರೆದುಕೊಂಡು ಹೋದ ನಾಯಕ ಇಡೀ ಕ್ರಿಶ್ಚಿಯನ್ ಸಮುದಾಯಕ್ಕೆ ಕಳಂಕವಾಗುತ್ತಿದ್ದಾರೆ. ಇಲ್ಲಿನ ಕ್ರಿಶ್ಚಿಯನ್ ಮುಖಂಡರು ಅದೆಂತಹ ಕೊಡುಗೆಗಳನ್ನು ಜಿಲ್ಲೆಗೆ ಕೊಟ್ಟಿದ್ದಾರೆ. ಆದರೆ ಇಂತಹ ಒಬ್ಬ ಮುಖಂಡ ಇವುಗಳನ್ನೆಲ್ಲಾ ಹಾಳುಮಾಡುತ್ತಿದ್ದಾರೆ” ಎಂದರು.