ಮೋದಿಯಂತೆ ಮತ್ತಾರೂ ಸಾಧಿಸಲಾಗುತ್ತಿರಲಿಲ್ಲ

  • ಆಕಾರ್ ಪಟೇಲ್

ನವಂಬರ್ 8ರಂದು ಘೋಷಿಸಲಾದ ನೋಟು ಅಮಾನ್ಯೀಕರಣ ಸೃಷ್ಟಿಸಿದ ಬಿಕ್ಕಟ್ಟಿನ ಸನ್ನಿವೇಶವನ್ನು ಬಹುಶಃ ನರೇಂದ್ರ ಮೋದಿಯಷ್ಟು ಸಮರ್ಥವಾಗಿ ಮತ್ತಾವ ನಾಯಕರೂ ಎದುರಿಸಲು ಸಾಧ್ಯವಿರಲಿಲ್ಲ. ಕಳೆದ ಏಳು ವಾರಗಳಲ್ಲಿ ನರೇಂದ್ರ ಮೋದಿ ತಮ್ಮ ಉತ್ತಮ ನಾಯಕತ್ವದ ಗುಣಗಳನ್ನು ಇಡೀ ದೇಶಕ್ಕೆ ಪರಿಚಯಿಸಿದ್ದಾರೆ. ಒಬ್ಬ ಸಮರ್ಥ ನಾಯಕನ ಸನ್ನಿಧಿಯಲ್ಲಿ ನಾವು ಇದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.

ನೋಟು ಅಮಾನ್ಯೀಕರಣದಿಂದ ಉಂಟಾದ ಬಿಕ್ಕಟ್ಟು ಮತ್ತು ಗೊಂದಲಗಳನ್ನು ಸರ್ಕಾರ ನಿರೀಕ್ಷಿಸಿರಲಿಲ್ಲ ಎಂದು ಹೇಳಲು ಹಲವು ಪುರಾವೆಗಳಿವೆ. ಈ ನೀತಿಯನ್ನು ಘೋಷಿಸಿದ ಸಂದರ್ಭದಲ್ಲಿ ನರೇಂದ್ರ ಮೋದಿ ಹೇಳಿದ ಕೆಲವು ನಿರೀಕ್ಷಿತ ಸಂಗತಿಗಳು ಸಮರ್ಥನೀಯವಾಗಿರಲಿಲ್ಲ.

ಎರಡನೆಯದಾಗಿ ನೋಟು ರದ್ದತಿಯಿಂದ ಉಂಟಾದ ಕ್ಷೋಭೆ, ಗೊಂದಲ ಮತ್ತು ಸಾರ್ವಜನಿಕ ಸಂಕಷ್ಟಗಳು ಉಲ್ಬಣಿಸುತ್ತಿದ್ದ ಸಂದರ್ಭದಲ್ಲಿ ಮೋದಿ ಜಪಾನ್ ಪ್ರವಾಸ ಕೈಗೊಂಡಿದ್ದರು. ಜಪಾನದಿಂದ ಹಿಂದಿರುಗುವ ವೇಳೆಗೆ ಪರಿಸ್ಥಿತಿ ಬಿಗಡಾಯಿಸಿತ್ತು. ಬ್ಯಾಂಕುಗಳ ಮುಂದಿನ ಸಾಲುಗಳು ಕಡಿಮೆಯಾಗುವ ಸಾಧ್ಯತೆಗಳೂ ಕ್ಷೀಣಿಸಿತ್ತು.

ಮೋದಿಯ ಆರಂಭಿಕ ಘೋಷಣೆ ಪ್ರಬಲವಾಗಿತ್ತು. ಸಾರ್ವಜನಿಕ ಮನ್ನಣೆಯನ್ನೂ ಗಳಿಸಿತ್ತು. ಮಾಧ್ಯಮಗಳು ಮೋದಿ ಪರವಾಗಿದ್ದವು.  ಆತ್ಮವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವೂ ತನ್ನ ಬೆಂಬಲ ವ್ಯಕ್ತಪಡಿಸಿತ್ತು. ಆದರೆ ಅಮಾನ್ಯೀಕರಣದ ಅಪಾಯವನ್ನು ಗ್ರಹಿಸಿದ್ದ ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕೇಜ್ರಿವಾಲ್ ಮಾತ್ರ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅಪಾರ ಜನಬೆಂಬಲ ಗಳಿಸುವುದರಲ್ಲಿ ಯಶಸ್ವಿಯಾಗಿದ್ದರು. ಮೋದಿ ಪರವಾಗಿ ಮತ ಚಲಾಯಿಸದ ಜನರೂ ಸಹ ಸರ್ಕಾರದ ಬೆಂಬಲಕ್ಕೆ ನಿಂತರು. ದೇಶದ ಆರ್ಥಿಕತೆಯಲ್ಲಿ ಮಹತ್ತರ ಬದಲಾವಣೆಯಾಗುವ ನಿರೀಕ್ಷೆಯಲ್ಲಿ ಜನ ತಮಗಾದ ಅನಾನುಕೂಲಗಳನ್ನು ಸಹಿಸಿಕೊಂಡಿದ್ದೂ ಉಂಟು. ಒಂದು ವೇಳೆ ಮನಮೋಹನ್ ಸಿಂಗ್ ಇಂತಹ ಒಂದು ನಿರ್ಧಾರ ಕೈಗೊಂಡಿದ್ದಲ್ಲಿ ನಗರ ಪ್ರದೇಶಗಳ ಮಧ್ಯಮ ವರ್ಗಗಳಲ್ಲಿ ಈ ಒಂದು ಉನ್ಮಾದ ಸೃಷ್ಟಿಸಲು ಬಹುಶಃ ಸಾಧ್ಯವಾಗುತ್ತಿರಲಿಲ್ಲ. ಜನರ ಪ್ರತಿರೋಧ ಹೆಚ್ಚಾಗುತ್ತಿತ್ತು.

ಏಳುವಾರಗಳ ಕಾಲ ಬಿಕ್ಕಟ್ಟು ಮುಂದುವರೆದಿದ್ದಲ್ಲಿ ಜನರ ಆಕ್ರೋಶ ಹೆಚ್ಚಾಗುತ್ತಿತ್ತು. ಈಗಲೂ ಜನರ ಆಕ್ರೋಶ ಮಡುಗಟ್ಟುತ್ತಿದೆ. ಸ್ಪೋಟಿಸುವ ಸಾಧ್ಯತೆಗಳಿವೆ. ತಮ್ಮ ಬವಣೆ ಇನ್ನೂ ಮುಂದುವರೆಯುತ್ತದೆ ಎಂಬ ಭೀತಿ ಇದಕ್ಕೆ ಕಾರಣವಾಗಿದೆ. ಆದರೆ ಏಳು ವಾರಗಳ ಕಾಲ ಈ ಬಿಕ್ಕಟ್ಟನ್ನು ಎದುರಿಸಿದ್ದು ಮೋದಿಯ ಸಾಧನೆ.

ಅಮಾನ್ಯೀಕರಣದಿಂದ ಸೃಷ್ಟಿಯಾದ ಬಿಕ್ಕಟ್ಟು ತಾವು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಾಗಿದೆ ಎಂದು ಬಹಳ ಬೇಗನೆ ಗ್ರಹಿಸಿದ್ದು ಮೋದಿಯ ನಾಯಕತ್ವದ ಗುಣಗಳನ್ನು ನಿರೂಪಿಸುತ್ತದೆ. ಹಾಗಾಗಿಯೇ ಜಪಾನದಿಂದ ಹಿಂದಿರುಗಿದ ಕೂಡಲೇ ಮೋದಿ ತಮ್ಮ ಭಾಷಣದಲ್ಲಿ, ತಾವು ಭಾರತಕ್ಕೆ ಒಳ್ಳೆಯದಾಗಲಿ ಎಂದೇ ದುಡಿಯುವುದಾಗಿಯೂ, ತಮ್ಮ ಕುಟುಂಬವನ್ನೂ ತ್ಯಾಗ ಮಾಡಿ ದೇಶಕ್ಕಾಗಿ ಪಣ ತೊಟ್ಟಿರುವುದಾಗಿಯೂ ಹೇಳುವ ಮೂಲಕ ಜನರ ಭಾವನೆಗಳಿಗೆ ಕನ್ನ ಹಾಕಿದ್ದರು.

ಈ ಭಾಷಣದ ಸಂದರ್ಭದಲ್ಲಿ ಮೋದಿ ಹಾಕಿದ ಕಣ್ಣೀರು ಬಹುಶಃ ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದಕ್ಕೆ ಸಾಕ್ಷಿಯಾಗಿತ್ತು. ಆರಂಭದಲ್ಲಿ ಐವತ್ತು ದಿನಗಳ ಒಳಗೆ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಹೇಳಿದ್ದ ಮೋದಿ ತಮ್ಮ ಭಾವನಾತ್ಮಕ ಭಾಷಣದ ಮೂಲಕ ಮತ್ತಷ್ಟು ಸಮಯಾವಕಾಶ ಪಡೆಯುವುದರಲ್ಲಿ ಯಶಸ್ವಿಯಾಗಿದ್ದರು. ಮತ್ತೊಮ್ಮೆ ಮಾಧ್ಯಮಗಳು ಮೋದಿಯ ಪರವಾಗಿದ್ದವು. ಜನಸಾಮಾನ್ಯರ ನಿತ್ಯ ಜೀವನದ ಸಂಕಷ್ಟಗಳ ಬಗ್ಗೆ ಯಾವುದೇ ಚರ್ಚೆ ನಡೆಯಲು ಅವಕಾಶವೇ ದೊರೆಯಲಿಲ್ಲ.

ಈ ಸಂದರ್ಭದಲ್ಲಿ ಪರಿಸ್ಥಿತಿ ತಂತಾನೇ ಸುಧಾರಿಸಲು ಅವಕಾಶ ಕೊಡಬಹುದಿತ್ತಾದರೂ ಮೋದಿ ವಿರೋಧ ಪಕ್ಷಗಳು ಆಗ್ರಹಿಸುವ ಮುನ್ನವೇ ಸ್ವತಃ ಒಂದು ಗಡುವನ್ನು ನಿಗದಿಪಡಿಸಿದ್ದರು. ಅಮಾನ್ಯೀಕರಣವನ್ನು ಘೋಷಿಸಿದಾಗ ಕಪ್ಪುಹಣದ ನಿರ್ಮೂಲನೆ, ನಕಲಿ ನೋಟ್ ದಂಧೆಯ ಅಂತ್ಯ ಮತ್ತು ಭಯೋತ್ಪಾದನೆಯ ನಿಗ್ರಹವನ್ನು ಕುರಿತು ಪ್ರಸ್ತಾಪಿಸಿದ್ದ ಮೋದಿ ಡಿಜಿಟಲ್ ಆರ್ಥಿಕತೆಯನ್ನು ಕುರಿತು ಸೊಲ್ಲೆತ್ತಿರಲಿಲ್ಲ.

ಜಪಾನ್ ಭೇಟಿಯ ನಂತರ ಹಠಾತ್ತನೆ ತಮ್ಮ ನಿಲುವು ಬದಲಾಯಿಸಿದ್ದು ಮೋದಿಯ ನಾಯಕತ್ವದ ಗುಣಗಳಿಗೆ ಕನ್ನಡಿ ಹಿಡಿದಂತಿದೆ. ತಾವು ಜಾರಿಗೊಳಿಸಿರುವ ನೀತಿ ಜನತೆಗೆ ಅನುಕೂಲಕರವಾಗುತ್ತದೆ, ಜನತೆ ಎದುರಿಸುತ್ತಿರುವ ಅನಾನುಕೂಲತೆಗಳು ತಾತ್ಕಾಲಿಕವಾಗಿದ್ದು ಭವಿಷ್ಯ ಉತ್ತಮವಾಗಿರುತ್ತದೆ ಎಂಬ ವಿಶ್ವಾಸ ಜನತೆಯಲ್ಲಿ ಇರುವವರೆಗೂ ಮೋದಿ ತಮ್ಮ ಈ ಚಾಣಕ್ಯ ನೀತಿಯನ್ನು ಅನುಸರಿಸುತ್ತಲೇ ಇರುತ್ತಾರೆ.

ದೇಶದ ಪ್ರತಿಯೊಬ್ಬ ನಾಗರಿಕನನ್ನೂ ಭಾಧಿಸಿರುವ ಅಮಾನ್ಯೀಕರಣ ನೀತಿ ಮೋದಿಯ ರಾಜಕೀಯ ಭವಿಷ್ಯಕ್ಕೂ ಮಾರಕವಾಗಿಲ್ಲ ಎನ್ನುವುದು ಪಂಜಾಬದÀ ಸ್ಥಳೀಯ ಚುನಾವಣೆಗಳಲ್ಲಿ ನಿರೂಪಿತವಾಗಿದೆ. ಈಗಲೂ ಮೋದಿ ಪರಿಸ್ಥಿತಿಯನ್ನು ತಮ್ಮ ಹಿಡಿತದಲ್ಲೇ ಇರಿಸಿಕೊಂಡಿದ್ದಾರೆ. ಜನಸಾಮಾನ್ಯರ ಆಕ್ರೋಶವನ್ನು ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ನವಂಬರ್ 8ರ ನಂತರ ಮೋದಿ ಸಾಧಿಸಿರುವುದನ್ನು ಬಹುಶಃ ಮತ್ತಾವ ನಾಯಕರೂ ಸಾಧಿಸಲು ಸಾಧ್ಯವಿಲ್ಲ. ಆದರೆ 2017ರಲ್ಲಿ ವೇತನ ಪಾವತಿಯ ಎರಡನೆಯ ಹಂತ ಆರಂಭವಾಗುತ್ತಿರುವಂತೆ ಈ ಪರಿಸ್ಥಿತಿ ಬದಲಾಗುತ್ತದೆ. ಈ ಸಂದರ್ಭದಲ್ಲಿ ಮೋದಿ ಹೇಗೆ ನಿಭಾಯಿಸುತ್ತಾರೆ ಎಂದು ಕಾದುನೋಡಬೇಕಿದೆ. ಏನೇ ಆದರೂ ಸಾರ್ವಜನಿಕ ಅಭಿಪ್ರಾಯದ ಮೇಲೆ ತಮ್ಮ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಮೋದಿ ಅಪ್ರತಿಮ ಎಂದು ನಿರೂಪಿಸಿದ್ದಾರೆ.