ಉಡುಪಿ ಬಿಷಪ್ ಸಮೇತ ಚರ್ಚಿನ ಐವರ ವಿರುದ್ಧ ಜಾಮೀನುರಹಿತ ವಾರಂಟ್

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಇಲ್ಲಿನ ಪ್ರಥಮ ದರ್ಜೆಯ ನ್ಯಾಯಾಲಯ ಉಡುಪಿ ಶೋಕಮಾತಾ ಇಗರ್ಜಿಯ ಗುರುಗಳಾದ ಫೆಡ್ರಿಕ್ ಮಸ್ಕರೇನಸ್, ಇಗರ್ಜಿಯ ಪರಿಷತ್ತಿನ ಉಪಾಧ್ಯಕ್ಷರಾದ ಬೊನಿಫಸ್ ಡಿಸೋಜ, ಕಾರ್ಯದರ್ಶಿ ಗ್ರೇಸಿಯನ್ ಬೊಥೆಲ್ಲೊ ಹಾಗೂ ಉಡುಪಿಯ ಧರ್ಮಪ್ರಾಂತ್ಯದ ಬಿಷಪ್ ಡಾ ಜೆರಾಲ್ಡ್ ಐಸಾಕ್ ಲೋಬೊ, ವಿಕಾರ್ ಜನರಲ್ ಬ್ಯಾಪ್ಟಿಸ್ಟ್ ಮಿನೇಜಸ್, ಇವರುಗಳ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಿದೆ.

ಉಡುಪಿ ಇಗರ್ಜಿಗೆ ಸಂಬಂಧಿಸಿದ ಲೆಕ್ಕಾಚಾರಗಳ ಕುರಿತು ಬೆನೆಡಿಕ್ಟ್ ನರೋನ್ಹಾ ಎನ್ನುವವರು ಸಲ್ಲಿಸಿದ ಖಾಸಗಿ ದೂರಿನನ್ವಯ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಜಾಮೀನುರಹಿತ ವಾರಂಟನ್ನು ಜಾರಿಗೊಳಿಸಿದ್ದಾರೆ. ಸದ್ರಿ ಆರೋಪಿಗಳ ವಿರುದ್ಧ ಈ ಹಿಂದೆ ಮೂರು ಬಾರಿ ಸಮನ್ಸ್ ಕೊಟ್ಟಿದ್ದರೂ, ಕೋರ್ಟಿಗೆ ಹಾಜರಾಗಿರಲಿಲ್ಲವಾದ್ದರಿಂದ ಕೋರ್ಟು ವಾರೆಂಟ್ ಹೊರಡಿಸಿದೆ. ಐಪಿಸಿ ಕಲಂ 408, 420, ಕಲಂ 120ಬಿ.ಯಂತೆ ಆರೋಪಿಗಳ ವಿರುದ್ಧ ಕೇಸು ದಾಖಲಿಸಲಾಗಿತ್ತು.