ಅಪಾಯಕಾರಿ ಸ್ಫೋಟಕ ಸಾಮಗ್ರಿಗಳ ಗೋದಾಮು ನಿರಾಕ್ಷೇಪಣಾ ಪತ್ರ ರದ್ದು

ಸಾಂದರ್ಭಿಕ ಚಿತ್ರ

ಜನರ ವಿರೋಧಕ್ಕೆ ಮಣಿದ ಕಾವಳಪಡೂರು ಗ್ರಾ ಪಂ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ತಾಲೂಕಿನ ಕಾವಳಪಡೂರು ಗ್ರಾಮದ ಪೆರುವಾದೆ ಎಂಬಲ್ಲಿ ಕಾರ್ಯಾ ಚರಣೆಗೆ ಸಿದ್ಧಗೊಂಡಿದ್ದ ಕಲ್ಲುಕ್ವಾರಿ ಒಡೆಯುವ ಸ್ಫೋಟಕ ಸಾಮಗ್ರಿ ಸಂಗ್ರಹದ ಗೋದಾಮಿನ ನಿರಾಕ್ಷೇಪಣಾ ಪತ್ರವನ್ನು ರದ್ದುಗೊಳಿಸುವ ನಿರ್ಣಯವನ್ನು ಗ್ರಾಮ ಪಂಚಾಯತ್ ಕೈಗೊಂಡಿದೆ.

ಈ ಮೂಲಕ ನಿರಾಕ್ಷೇಪಣಾ ಪತ್ರ ರದ್ದುಗೊಳಿಸದಂತೆ ಮತ ಹಾಕಿದ್ದ ಹಲವು ವರ್ಷಗಳಿಂದ ಜನಸಾಮಾನ್ಯರ ಓಟು ಪಡೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕೆಲವು ಹಿರಿಯ ಸದಸ್ಯರ ಮುಖಕ್ಕೆ ಸಡ್ಡು ಹೊಡೆದಂತಾಗಿದೆ.

ಅಶೋಕ ಪಾಟ್ನರ್ ಒಕ್ಕೂಪಯರ್ ಶ್ರೀ ರಾಮ ಕನಸ್ಟ್ರಕ್ಷನ್, ಭಂಡಾರಿಬೆಟ್ಟು ಮಾಲಕತ್ವದ ಈ ಗೋದಾಮು ಜನಸಾಮಾನ್ಯರ ವಿರೋಧದ ನಡುವೆಯೂ ಕಾರ್ಯಾಚರಣೆಗೆ ಮುಂದಾಗಿತ್ತು. ಇದರಿಂದ ಅಪಾಯದ ಭೀತಿಯಲ್ಲಿ ಆತಂಕಗೊಂಡಿದ್ದ ಜನಸಾಮಾನ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪಂಚಾಯತ್ ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಪರಿಣಾಮ ಕಾವಳಪಡೂರು ಗ್ರಾಮ ಪಂಚಾಯತ್ ವಿಶೇಷ ಸಭೆಯನ್ನು ಕರೆದು ಪ್ರಕರಣವನ್ನು ಮತಕ್ಕೆ ಹಾಕಿತ್ತು.

ನಿರಪೇಕ್ಷಣಾ ಪತ್ರ ರದ್ದುಗೊಳಿಸುವಂತೆ 9 ಸದಸ್ಯರು ಮತದಾನ ಮಾಡಿದ್ದರೆ ರದ್ದುಗೊಳಿಸ ಬಾರದು ಎಂದು 4 ಸದಸ್ಯರು ಮತ ಹಾಕಿದ್ದರು ಮತ್ತು ತಟಸ್ಥರಾಗಿ 2 ಮತಗಳು ಬಂದಿದ್ದವು. ಗ್ರಾ ಪಂ ಸದಸ್ಯರ ಬಹುಮತದ ಆಧಾರದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಗ್ರಾಮ ಪಂಚಾಯತ್ ಈ ನಿರ್ಣಯವನ್ನು ಕೈಗೊಂಡಿದೆ. ಗ್ರಾಮ ಪಂಚಾಯತ್ ನಿರ್ಣಯದಿಂದ ಸ್ಥಳೀಯ ನಿವಾಸಿಗಳು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.