ಸರಿಪಳ್ಳದಲ್ಲಿ ವಾರದಿಂದ ನೀರಿಲ್ಲ

ಸಾಂದರ್ಭಿಕ ಚಿತ್ರ

ಮಂಗಳೂರು : ನಗರದ ಹೊರವಲಯದ ಸರಿಪಳ್ಳದಲ್ಲಿ ಕಳೆದ ಒಂದು ವಾರದಿಂದ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಸಂಬಂಧ ಪಟ್ಟವರನ್ನು ಗ್ರಾಮಸ್ಥರು ತೀವ್ರ ತರಾಟಗೆತ್ತಿಕೊಂಡಿರುವ ಘಟನೆ ನಡೆದಿದೆ.

ಜನತೆ ಎದುರಿಸುತ್ತಿರುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ನೀರುಮಾರ್ಗ ಗ್ರಾಮ ಪಂಚಾಯತ್ ಸಾರ್ವಜನಿಕ ಅಭಿವೃದ್ಧಿ ಅಧಿಕಾರಿ (ಪಿಡಿಓ) ಲಿಂಗಪ್ಪಯ್ಯ ತಿಳಿಸಿದ್ದಾರೆ. ಸರಿಪಳ್ಳದ ಪೆದಮಲೆ ವಾರ್ಡ್ ಜನಸಂಪರ್ಕ ಸಭೆ ಸರಿಪಳ್ಳದಲ್ಲಿ ನಡೆದು ಗ್ರಾಮಸ್ಥರು ನೀರಿನ ಬವಣೆ ಬಗ್ಗೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಈ ವೇಳೆ ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತರಾದ ಕಮಲಾಕ್ಷ ಅವರು, “ಇದುವರೆಗೂ ಇಲ್ಲಿ ನೀರು ಬಿಡುತ್ತಿದ್ದ ಸಿಬ್ಬಂದಿ  ಸಂದೇಶ್ ಮೇಲೆ ವಿನಾಕಾರಣ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿರುವುದರಿಂದ, ಸಂದೇಶ್ ಇದೀಗ ನೀರು ಬಿಡಲು ಬರುತ್ತಿಲ್ಲ. ಇದರಿಂದಾಗಿ ನೀರಿನ ಸಮಸ್ಯೆ ಎದುರಾಗಲು ಕಾರಣವಾಗಿದ್ದು, ಈ ನಿಟ್ಟಿನಲ್ಲಿ ಪಂಚಾಯತ್ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು” ಎಂದು ಆಗ್ರಹಿಸಿದರು.

ಈ ಸಂದರ್ಭ ರೊಚ್ಚಿಗೆದ್ದ ಮಹಿಳೆಯರು ಕೂಡಾ “ಈ ಸಮಸ್ಯೆ ಬಿಗಡಾಯಿಸಲು ಸಂದೇಶ್ ಕಾರಣವಾಗಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಆತನ ಸಮಸ್ಯೆ ಮುಂದಿಟ್ಟುಕೊಂಡು ನಮಗೆ ನೀರು ಪಾವತಿಸದೇ ಇರುವುದನ್ನು ನಾವು ಎಷ್ಟು ಮಾತ್ರಕ್ಕೂ ಸಹಿಸೆವು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊನೆಗೆ ಸಾರ್ವಜನಿಕರ ಆಕ್ರೋಶ ಕಂಡು ಪ್ರತಿಕ್ರಿಯೆ ನೀಡಿದ ಪಿಡಿಓ ಲಿಂಗಪ್ಪಯ್ಯ ಅವರು, ಹೊಸ ವಾಲ್ಮನ್ ನೇಮಕ ಆಗುವವರೆಗೂ ನೀರು ಸಮಿತಿಯವರೇ ನೀರು ಬಿಡುವ ಜವಾಬ್ದಾರಿ ವಹಿಸುವಂತೆ ಸೂಚಿಸಿದರು. ಅಲ್ಲದೇ ಈ ಹಿಂದೆ  ಸಂದೇಶ್‍ರವರ ಮೇಲಿನ ಕೇಸು ಹಿಂಪಡೆಯುವ ಬಗ್ಗೆ ಈಗಾಗಲೇ ಮಂಗಳೂರು ಗ್ರಾಮಾಂತರ ಠಾಣೆಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಸಭೆಯಲ್ಲಿ ನೀರುಮಾರ್ಗ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಸ್ತೂರಿ, ವಿನ್ಸೆಂಟ್ ಡಿ ಸೋಜಾ, ವಿಕ್ಟರ್ ಮೊದಲಾದವರು ಉಪಸ್ಥಿತರಿದ್ದರು.