`ದರ್ಪಿಷ್ಟ , ಸೋಮಾರಿ ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಇಲ್ಲ ‘

ಬೆಂಗಳೂರು : ಹಾಲಿ ಶಾಸಕರಾಗಿರುವ ಒಂದೇ ಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕೇ ಸಿಗುವುದು ಎಂಬ ಭ್ರಮೆ ಯಾರಿಗೂ ಬೇಡ ಎಂದು ಎಐಸಿಸಿ  ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸೋಮಾರಿ ಮತ್ತು ದುರಹಂಕಾರಿ ಶಾಸಕರಿಗೆ ಟಿಕೆಟ್ ನೀಡದೇ ಇರುವ ಪಕ್ಷದ ನಿರ್ಧಾರವನ್ನು ಪುನರುಚ್ಛರಿಸಿರುವ ಅವರು 36 ಶಾಸಕರ ಸ್ಥಾನಗಳಿಗೆ ಪರ್ಯಾಯ ಹೆಸರುಗಳನ್ನು ಸೂಚಿಸುವಂತೆ ಪಕ್ಷದ ರಾಜ್ಯ ವರಿಷ್ಠರಿಗೆ ನಿರ್ದೇಶನ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್ ಆರ್ ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೊಂದಿಗೆ ತಡ ರಾತ್ರಿಯವರೆಗೂ ಖಾಸಗಿ ಹೋಟೆಲ್ ಒಂದರಲ್ಲಿ ಸಮಾಲೋಚನೆ ನಡೆಸಿರುವ ವೇಣುಗೋಪಾಲ್,  ಹಲವು ಶಾಸಕರು ಬಿಜೆಪಿ ಹಾಗೂ ಜೆಡಿ(ಎಸ್) ಜತೆ ಸಂಪರ್ಕದಲ್ಲಿರುವುದನ್ನು ಕೂಡ ಗಂಭೀರವಾಗಿ ಪರಿಗಣಿಸಲಾಗಿದೆ ಎಂದರಲ್ಲದೆ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಲಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಕ್ರಿಮಿನಲ್ ಕೇಸುಗಳಲ್ಲಿ ಸಿಕ್ಕಿಕೊಂಡಿರುವ ಶಾಸಕರಿಗೆ ಪಕ್ಷದ ಟಿಕೆಟ್ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಚುನಾವಣೆ ಹತ್ತಿರ ಬರುತ್ತಿರುವ ಇಂತಹ ಸಮಯದಲ್ಲಿ ಇತರ ಪಕ್ಷಗಳೊಂದಿಗೆ ಅಂತರ ಕಾಯ್ದುಕೊಳ್ಳುವಂತೆ ಶಾಸಕರಿಗೆ ಕಿವಿ ಮಾತು ಹೇಳಿರುವ ಅವರು  ಅಂತೆಯೇ ಬೇರೆ ಪಕ್ಷಗಳಿಂದ ಕಾಂಗ್ರೆಸ್ ಸೇರಲು ಹಾತೊರೆಯುವವರ ಬಗ್ಗೆಯೂ ಎಚ್ಚರವಿರಲಿ ಎಂದು ತಿಳಿಸಿದ್ದಾರೆ.

ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ಹಾಗೂ ಚುನಾವಣಾ ಪೂರ್ವ ತಯಾರಿಯ ಬಗ್ಗೆಯೂ ವೇಣುಗೋಪಾಲ್ ಅಸಹನೆ ವ್ಯಕ್ತಪಡಿಸಿದ್ದಾರೆ. ಬಹಳ ಪ್ರಚಾರದಿಂದ ಉದ್ಘಾಟನೆಗೊಂಡ ಮನೆ ಮನೆಗೆ ಕಾಂಗ್ರೆಸ್ ಮುಂತಾದ ಕಾರ್ಯಕ್ರಮಗಳ ಸಮರ್ಪಕ ಜಾರಿಯಾಗುತ್ತಿಲ್ಲ, ಹಲವು ಜಿಲ್ಲೆಗಳಲ್ಲಿ ಸಚಿವರಿಂದ ಪಕ್ಷ ಘಟಕಗಳಿಗೆ ಸಾಕಷ್ಟು ಪ್ರೋತ್ಸಾಹ ದೊರಕುತ್ತಿಲ್ಲ ಎಂಬ ಆರೋಪಗಳನ್ನೂ  ವೇಣುಗೋಪಾಲ್ ಗಂಭೀರವಾಗಿ ಪರಿಗಣಿಸಿದ್ದಾರೆ.

ಸಭೆಯಲ್ಲಿ ಹಾಜರಿದ್ದ ಮುಖ್ಯಮಂತ್ರಿ ಮಾರ್ಚ್ 1ರಿಂದ ಪಕ್ಷದ ವತಿಯಿಂದಲೇ ಜನಾಶೀರ್ವಾದ ರ್ಯಾಲಿ ನಡೆಸುವ ತನ್ನ ಇಚ್ಛೆಯ ಬಗ್ಗೆ ತಿಳಿಸಿದ್ದಾರೆ. ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಕ್ಕೆ  ರಾಹುಲ್ ಗಾಂಧಿ ಆಗಮಿಸಬೇಕೆಂಬ ಸಲಹೆಯನ್ನೂ ಅವರು ನೀಡಿದ್ದಾರೆ.