ಭ್ರಷ್ಟಾಚಾರಕ್ಕೆ ಆಸ್ಪದ ನೀಡದ ಪ್ರಜ್ಞಾವಂತರ ಪಕ್ಷ ನಮ್ಮದು

ಪ್ರಜಾಕೀಯ ಪಕ್ಷ ಸಂಸ್ಥಾಪಕ ಉಪೇಂದ್ರ ಹೇಳಿಕೆ

ಮ್ಮ ಪ್ರತಿನಿಧಿ ವರದಿ

ಮಂಗಳೂರು : “ಎಲ್ಲಿ ಸತ್ಯವಿರುತ್ತದೆಯೋ ಅಲ್ಲಿ ಧರ್ಮವಿದೆ. ನಮ್ಮದು ಪ್ರಜ್ಞಾವಂತರ ಪಕ್ಷವಾಗಿದ್ದು, ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ ಕಾರ್ಯನಿರ್ವಹಿಸಲಿದೆ. ಶಿಕ್ಷಣ, ವೈದ್ಯಕೀಯ ಸೇವೆಗಳು ಉಚಿತವಾಗಿ ಸಿಕ್ಕಿದಲ್ಲಿ ಭ್ರಷ್ಟಾಚಾರ ಕಡಿಮೆಯಾಗಲಿದೆ” ಎಂದು ಖ್ಯಾತ ನಟ, ಕರ್ನಾಟಕ ಪ್ರಜ್ಞಾವಂತ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಜ್ಞಾವಂತರು ನಮ್ಮ ಪಕ್ಷಕ್ಕೆ ಬನ್ನಿ. ನಾನು ಒಬ್ಬ ಕಾರ್ಮಿಕನಾಗಿ ನಿಮ್ಮ ಜೊತೆ ಕೆಲಸ ಮಾಡುತ್ತೇನೆ. ಇಂದು ಅನ್ಯಾಯವನ್ನು ಪ್ರತಿಭಟಿಸುವ ಶಕ್ತಿ ನಮ್ಮಲ್ಲಿಲ್ಲ. ದೇಶದಲ್ಲಿ ಶೇ 80ರಷ್ಟು ಒಳ್ಳೆಯವರಿದ್ದಾರೆ. ಈ ಶೇ 80ರಷ್ಟು ಜನತೆಯ ಪ್ರತಿನಿಧಿಯಾಗಿ ನಾನು

ಬಂದಿದ್ದೇನೆ. ಆದರೆ ಸಮಾಜದಲ್ಲಿ ಇರುವ ಕೇವಲ 20ರಷ್ಟು ಮಂದಿ ಕೆಟ್ಟವರು ಇಂದು ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ. ಹೀಗಾಗಬಾರದು” ಎಂದರು.

“ದೇಶದ ಸಂವಿಧಾನವೇ ನನ್ನ ರಾಜಕೀಯ ಪ್ರವೇಶಕ್ಕೆ ಪ್ರೇರಣೆ. ರಾಜಕೀಯಕ್ಕೆ ಬೇಕಾಗಿರುವುದು ನಾಯಕರು, ಸೇವಕರಲ್ಲ. ಆದರೆ, ಇಂದು ವ್ಯವಸ್ಥೆ ಬದಲಾಗಿದೆ. ಗೆದ್ದ ಮೇಲೆ ಜನನಾಯಕರನ್ನು ಹುಡುಕುವುದೇ ಕಷ್ಟವಾಗಿದೆ. ಆದರೆ, ಪ್ರಜಾಕೀಯದಲ್ಲಿ ಹಾಗಲ್ಲ. ಚುನಾವಣೆಗೆ ದುಡ್ಡು ಖರ್ಚು ಮಾಡುವುದಿಲ್ಲ. ಪಕ್ಷ ಬಲವರ್ಧನೆಗೆ ದುಡ್ಡು ಸಂಗ್ರಹವಿಲ್ಲ. ಬೆಂಗಾವಲಿಗರನ್ನು ಇಟ್ಟುಕೊಂಡು ಜೈಕಾರ ಹಾಕಿ ಜನಬೆಂಬಲದ ಪ್ರದರ್ಶನವಿಲ್ಲ. ಇದೆಲ್ಲ ನಿಜವಲ್ಲ ; ಬರೀ ಭ್ರಮೆ. ಪಕ್ಷದ ಮೇಲೆ ನಂಬಿಕೆ ಇಟ್ಟು ಬರುವವರಿಗೆ, ಕೆಲಸ ಮಾಡುವವರಿಗೆ, ವ್ಯವಸ್ಥೆಯನ್ನು ಬದಲಾಯಿಸುವ ಮನಸುಗಳಿಗೆ, ನಾಡಿನ ನಿಜವಾದ ಅಭಿವೃದ್ಧಿಯನ್ನು ಬಯಸುವವರಿಗೆ ಪ್ರಜಾಕೀಯದ ಬಾಗಿಲು ಸದಾ ತೆರೆದಿರುತ್ತದೆ” ಎಂದರು.

“ಇಂದು ಪ್ರತಿಯೊಬ್ಬರೂ ಮುಖ್ಯಮಂತ್ರಿಯಾಗಬೇಕು. ನನಗೆ ಬೇಕಾಗಿರುವುದು 224 ಮಂದಿ ಮುಖ್ಯಮಂತ್ರಿಯ ಹಾಗೆ ಕೆಲಸ ಮಾಡುವವರು. ಅವರವರ ಕ್ಷೇತ್ರದಲ್ಲಿ ಅವರೇ ಮುಖ್ಯಮಂತ್ರಿಗಳಾಗಿ ಕೆಲಸ ನಿರ್ವಹಿಸಬೇಕು. ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವಿರುವರಾಗಿರಬೇಕು. ನಿಜವಾಗಿಯೂ `ಕೆಪಿಜೆಪಿ-ಪ್ರಜಾಕೀಯ’ದ ಮೇಲೆ ನಂಬಿಕೆ ನಿಮಗೆ ಇದ್ದರೆ ನಮ್ಮನ್ನು ಬೆಂಬಲಿಸಿ” ಎಂದರು.

“ಪ್ರಜಾಕೀಯವನ್ನು ಬೆಂಬಲಿಸಿದರೂ ದೊಡ್ಡ ಮಟ್ಟದ ಪ್ರಚಾರವಾಗುತ್ತದೆ. ಮಾತನಾಡೋಕೆ ವಿಷಯವಿದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಆಸೆಯಿದೆ. ಆದರೆ, ಇದ್ಯಾವುದೂ ಇಲ್ಲವಾದರೆ ಮಾಸ್ ಹಿಸ್ಟೀರಿಯಾ ಸೃಷ್ಟಿ ಮಾಡುವಂತಾಗುತ್ತದೆ. ಇದು ಪ್ರಜಾಕೀಯದ ಉದ್ದೇಶವಲ್ಲ. ಗೆದ್ದ ಮೇಲೆ ನಿರಂತರ ಜನಸಂಪರ್ಕದಲ್ಲಿರುವವರೇ ನಿಜವಾದ ನಾಯಕ. ಗೆದ್ದ ಮೇಲೆ ಕೋಟೆಯೊಳಗೆ ಕೂತು ಜನರ ಸಂಪರ್ಕಕ್ಕೆ ಬಾರದಿದ್ದರೆ, ಜನರ ಕಷ್ಟಗಳನ್ನು ಆಲಿಸದೆ ಹೋದರೆ ಏನು ಪ್ರಯೋಜನ” ಎಂದು ಉಪೇಂದ್ರ ಪ್ರಶ್ನಿಸಿದರು.

 

 

LEAVE A REPLY