ಸದ್ಯಕ್ಕೆ ನೂತನ ಎಚ್1ಬಿ ವೀಸಾ ನಿಯಮ ಇಲ್ಲ ?

ನವದೆಹಲಿ : ಅಮೆರಿಕಕ್ಕೆ ಉದ್ಯೋಗ ನಿಮಿತ್ತ ತೆರಳಿರುವ ಲಕ್ಷಾಂತರ ಭಾರತೀಯರಿಗೆ ದುಃಸ್ವಪ್ನವಾಗಿರುವ ಎಚ್ 1ಬಿ ವೀಸಾ ನಿಬಂಧನೆಯನ್ನು ಸದ್ಯಕ್ಕೆ ಜಾರಿಗೊಳಿಸುವುದಿಲ್ಲ ಎಂದು ಅಮೆರಿಕದ ಅಧಿಕಾರಿಯೊಬ್ಬರು ಭರವಸೆ ನೀಡಿದ್ದಾರೆಂದು ಎನ್‍ಡಿಟಿವಿ ವರದಿ ಮಾಡಿದೆ.

ಎಚ್ 1ಬಿ ವೀಸಾ ನಿಬಂಧನೆಗಳು ಭಾರತ ಹಾಗೂ ಅಮೆರಿಕ ನಡುವಿನ ಪ್ರವಾಸ ಹಾಗೂ ಔದ್ಯೋಗಿಕ ವಾತಾವರಣಕ್ಕೆ ಧಕ್ಕೆಯುಂಟಾಗುತ್ತದೆ ಎಂಬ ನಿಲುವು ವ್ಯಕ್ತವಾಗಿದೆ. ಇದೇ ನಿಲುವು ಸೆ 27ರಂದು ನಡೆಯಲಿರುವ ಭಾರತ ಹಾಗೂ ಅಮೆರಿಕದ ಅಧಿಕಾರಿಗಳ ಸಮಾವೇಶದಲ್ಲಿ ವ್ಯಕ್ತವಾಗಲಿದೆ. ಈ ಬಗ್ಗೆ ಹೆಸರನ್ನೇಳಲು ಇಚ್ಛಿಸದ ಅಮೆರಿಕದ ರಾಜತಾಂತ್ರಿಕ ಅಧಿಕಾರಿಯೊಬ್ಬರು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಾರತೀಯರಿಗೆ ಎಚ್1 ಬಿ ವೀಸಾಗಳನ್ನು ಹೆಚ್ಚಾಗಿ ನೀಡಲಾಗಿದೆ ಎಂದಿದ್ದಾರೆ.

ನೂತನ ಎಚ್ 1ಬಿ ವೀಸಾ ಮೇಲಿನ ನಿಬಂಧನೆಗಳನ್ನು ಜಾರಿಗೊಳಿಸಿದರೆ ಉಭಯ ದೇಶಗಳ ಕೆಲ ವಿಚಾರಗಳಿಗೆ ಅಡಚಣೆಯಾಗುವುದರಿಂದ ಸದ್ಯಕ್ಕೆ ಈ ನಿಯಮಗಳನ್ನು ಜಾರಿಗೊಳಿಸದಿರಲು  ಅಮೆರಿಕದ ಅಧ್ಯಕ್ಷ ಟ್ರಂಪ್ ನಿರ್ಧರಿಸಿದ್ದಾರೆಂದು ಅವರು ತಿಳಿಸಿದ್ದಾರೆಂದು ಹೇಳಲಾಗಿದೆ.