ಬಲಪಂಥೀಯ ಚಿಂತಕರಿಗೆ ರಾಜ್ಯದಿಂದ ರಕ್ಷಣೆ ಇಲ್ಲ

ಬಿಜೆಪಿ ಆರೋಪ

ಬೆಂಗಳೂರು : ಗೌರಿ ಲಂಕೇಶ್ ಹತ್ಯೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಅನೇಕ ಬುದ್ಧಿ ಜೀವಿಗಳಿಗೆ, ಪ್ರಗತಿಪರ ಚಿಂತಕರಿಗೆ ಮತ್ತು ಕಾರ್ಯಕರ್ತರಿಗೆ ಪೊಲೀಸ್ ರಕ್ಷಣೆ ಒದಗಿಸಿದ್ದು, ಖ್ಯಾತ ಲೇಖಕ ರಾಮಚಂದ್ರ ಗುಹಾ ಈ ಪಟ್ಟಿಯಿಂದ ಹೊರಗುಳಿದಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತ್ತು ಬಿಜೆಪಿಯ ವಿರುದ್ಧ ಟೀಕಾತ್ಮಕವಾದ ಲೇಖನಗಳನ್ನು ಬರೆಯುವ ರಾಮಚಂದ್ರ ಗುಹಾ, ತಮಗೆ ಅನೇಕ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಇತ್ತೀಚೆಗೆ ಟ್ವಿಟರಿನಲ್ಲಿ ಮಾಹಿತಿ ನೀಡಿದ್ದರು.

ಇತ್ತೀಚೆಗೆ ಹಲವರಿಂದ ಬೆದರಿಕೆ ಕರೆಗಳನ್ನು ಪಡೆದಿರುವ ಬಲಪಂಥೀಯ ಸಾಹಿತಿಗಳಾದ ಚಿದಾನಂದ ಮೂರ್ತಿ ಮತ್ತು ಎಸ್ ಎಲ್ ಭೈರಪ್ಪ ಅವರನ್ನೂ ರಾಜ್ಯ ಸರ್ಕಾರ ಕಡೆಗಣಿಸಿದೆ ಎಂದು ಬಿಜೆಪಿ ಆರೋಪಿಸಿದೆ.

ಯಾವುದೇ ಲೇಖಕರು, ಸಾಹಿತಿಗಳು ತವiಗೆ ರಕ್ಷಣೆ ನೀಡುವಂತೆ ಖುದ್ದಾಗಿ ಸರ್ಕಾರವನ್ನು ಆಗ್ರಹಿಸದಿದ್ದರೂ, ಗೌರಿ ಲಂಕೇಶ್ ಹತ್ಯೆಯ ಹಿನ್ನೆಲೆಯಲ್ಲಿ ಸರ್ಕಾರವೇ ಕೆಲವರಿಗೆ ರಕ್ಷಣೆ ನೀಡಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಗಿರೀಶ್ ಕಾರ್ನಾಡ್, ನಿಡುಮಾಮಿಡಿ ಮಠದ ಚನ್ನಮಲ್ಲ ಸ್ವಾಮಿ, ಕೆ ಎಸ್ ಭಗವಾನ್, ಪಾಟೀಲ್ ಪುಟ್ಟಪ್ಪ, ಚನ್ನವೀರ ಕಣವಿ, ಬರಗೂರು ರಾಮಚಂದ್ರಪ್ಪ, ಕುಂ ವೀರಭದ್ರಪ್ಪ, ಬಂಜಗೆರೆ ಜಯಪ್ರಕಾಶ್, ಯೋಗೇಶ್ ಮಾಸ್ಟರ್, ಕೆ ಮರುಳಸಿದ್ಧಪ್ಪ ಮತ್ತು ನರೇಂದ್ರ ನಾಯಕ್ ಅವರಿಗೆ ರಾಜ್ಯ ಸರ್ಕಾರ ರಕ್ಷಣೆ ಒದಗಿಸಿದೆ. ಹಿಂದುತ್ವದ ವಿರುದ್ಧ ಹೋರಾಡುತ್ತಿರುವ ಕೆ ಎಸ್ ಭಗವಾನ್ ಮತ್ತು ಚನ್ನಮಲ್ಲ ಸ್ವಾಮಿ ಬಲಪಂಥೀಯರ ತೀವ್ರ ಆಕ್ಷೇಪಕ್ಕೆ ಗುರಿಯಾಗಿದ್ದು, ಹೆಚ್ಚಿನ ಭೀತಿ ಎದುರಿಸುತ್ತಿರುವುದಾಗಿ ಹೇಳಲಾಗಿದೆ.