ಪೇದೆ ಅಮಾನತಿಗೆ ಒತ್ತಡವಿಲ್ಲ : ಎಸ್ಪಿ , ಸಚಿವ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಗರ್ಭಿಣಿ ಪತ್ನಿಯನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಚುಡಾಯಿಸಿದ ಯುವಕನಿಗೆ ಹಲ್ಲೆ ನಡೆಸಿರುವ ಆರೋಪವನ್ನು ಹೊಂದಿರುವ ಮಲ್ಪೆ ಠಾಣಾ ಪೇದೆ ಪ್ರಕಾಶರನ್ನು ಉಡುಪಿ ಎಸ್ಪಿ ಬಾಲಕೃಷ್ಣ ಅಮಾನತು ಮಾಡಿರುವ ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರೀ ಸುದ್ದಿಗಳು ಹಬ್ಬುತ್ತಿವೆ. ಇನ್ನೊಂದೆಡೆ ಪೇದೆಯನ್ನು ಅಮಾನತು ಮಾಡಿರುವ ಎಸ್ಪಿ ಕ್ರಮ ಮತ್ತು ಪೇದೆ ಅಮಾನತು ಮಾಡಲು ಸಚಿವ ಪ್ರಮೋದ್ ಮಧ್ವರಾಜ್ ಒತ್ತಡ ಹೇರಿದ್ದಾರೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಬಹಳಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಇದೇ ವೇಳೆ ಪೊಲೀಸ್ ಪೇದೆ ಪ್ರಕಾಶನಿಂದ ಹಲ್ಲೆಗೊಳಗಾಗಿದ್ದಾರೆನ್ನಲಾಗಿರುವ ಮಲ್ಪೆ ಫಿಶ್ಮಿಲ್ ಉದ್ಯೋಗಿ ಕುಮಾರ್ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಎ 5ರಂದು ಪ್ರಕಾಶ್ ಗರ್ಭಿಣಿ ಪತ್ನಿಯೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಕುಮಾರ್ ಮತ್ತು ಇನ್ನೊಬ್ಬರು ಪ್ರಕಾಶ್ ಪತ್ನಿಗೆ ಚುಡಾಯಿಸಿದ್ದರು. ಈ ವೇಳೆ ಆಕ್ರೋಶಗೊಂಡ ಪ್ರಕಾಶ್ ಅವರಿಗೆ ಥಳಿಸಿದ್ದರು.

`ಕಾರು ಚಾಲಕ ಸಭ್ಯ`

ನನ್ನ ಸಂಸ್ಥೆಯಲ್ಲಿ ಚಾಲಕ ವೃತ್ತಿಯಲ್ಲಿರುವ ಕುಮಾರ್ ಸಭ್ಯ ಯುವಕ. ಕಳೆದ 15 ವರ್ಷಗಳಿಂದ ನಮ್ಮ ಜೊತೆಗೆ ಕೆಲಸ ಮಾಡಿಕೊಂಡಿದ್ದು, ಆತನ ಕೆಟ್ಟ ನಡತೆಯ ಬಗ್ಗೆ ನನಗೆ ಇದುವರೆಗೂ ದೂರು ಬಂದಿಲ್ಲ. ಆತ ಆ ರೀತಿ ಕೆಟ್ಟದಾಗಿ ವರ್ತನೆ ಮಾಡಲು ಸಾಧ್ಯವೇ ಇಲ್ಲ ಎಂದು ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

 ಅಮಾನತಿಗೆ ಒತ್ತಡ ಇಲ್ಲ

ಪೇದೆ ಪ್ರಕಾಶ್ ಅವರ ಪತ್ನಿ ಮೇಲೆ ನಡೆದ ಕಿರುಕುಳ ಪ್ರಕರಣದಲ್ಲಿ ಅಮಾನತಾದ ಪೇದೆ ಮೇಲೆ ಇಲಾಖಾ ತನಿಖೆ ನಡೆಯಲಿದ್ದು, ಆರೋಪಿ ಕುಮಾರ್ ವಿರುದ್ಧವೂ ತನಿಖೆ ನಡೆಯಲಿದೆ ಎಂದು ಎಸ್ಪಿ ಬಾಲಕೃಷ್ಣ ತಿಳಿಸಿದ್ದಾರೆ.

ಆದರೆ ಪೇದೆ ಅಮಾನತಿಗೆ ಸಚಿವರ ಒತ್ತಡ ಬಂದಿದೆ ಎನ್ನುವುದು ಸುಳ್ಳು ಸುದ್ದಿಯಾಗಿದೆ. ಪೇದೆಯನ್ನು ಅಮಾನತು ಮಾಡುವ ಬಗ್ಗೆ ಯಾರಿಂದಲೂ ಒತ್ತಡ ಬಂದಿಲ್ಲ. ಮೆಡಿಕೋ ಲೀಗಲ್ ಪ್ರಕರಣ ದಾಖಲಾಗಿರುವ ಕಾರಣ ಅವರನ್ನು ಅಮಾನತು ಮಾಡಿ ವಿಚಾರಣೆ ನಡೆಯಲಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದರು.

ಅಲ್ಲದೆ ಪ್ರಕಾಶ್ ಪತ್ನಿ ಜ್ಯೋತಿ ಅವರು ಕುಮಾರ್ ವಿರುದ್ಧ ಉಡುಪಿ ಮಹಿಳಾ ಠಾಣೆಗೆ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದೇವೆ. ಎರಡೂ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ.